ಬಿಗ್‌ಬಾಸ್ 12 ಕನ್ನಡ ಈ ವಾರದ ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಯು ಮನೆ ಸದಸ್ಯರಿಗೆ ಮತ್ತು ವೀಕ್ಷಕರಿಗೆ ಬಿಗ್ ಶಾಕ್ ನೀಡಿದೆ. ಏಕೆಂದರೆ, ಈ ಬಾರಿ ಒಬ್ಬರಲ್ಲ ಬದಲಿಗೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದಾರೆ. ಅಚ್ಚರಿಯ ವಿಷಯವೆಂದರೆ, ಈ ಬಾರಿ ಇದು ನಿಜವಾದ ಎಲಿಮಿನೇಷನ್ ಆಗಿರದೇ ಇರಬಹುದು ಎಂಬ ಕುತೂಹಲಕಾರಿ ಸುಳಿವು ಕೂಡ ದೊರಕಿದೆ.
ಈ ವಾರ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ ಮತ್ತು ಸ್ಪಂದನಾ ಸೇರಿದಂತೆ ಹಲವು ಸ್ಪರ್ಧಿಗಳು ನಾಮಿನೇಷನ್ ಪಟ್ಟಿಯಲ್ಲಿದ್ದರು. ಸುದೀಪ್ ಅವರು ಒಬ್ಬೊಬ್ಬರಾಗಿ ಸ್ಪರ್ಧಿಗಳನ್ನ ಸೇಫ್ ಮಾಡುತ್ತಾ ಬಂದರು. ಕೊನೆಯಲ್ಲಿ ಮೂವರು ಸ್ಪರ್ಧಿಗಳಾದ ರಜತ್ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ಎಲಿಮಿನೇಷನ್‌ಗಾಗಿ ಉಳಿದಿದ್ದರು.
ಸಾಮಾನ್ಯವಾಗಿ ಈ ಹಂತದಲ್ಲಿ ಒಬ್ಬ ಸ್ಪರ್ಧಿಯನ್ನು ಹೊರಗೆ ಕಳುಹಿಸಲಾಗುತ್ತಿತ್ತು. ಆದರೆ, ನಿರೂಪಕ ಕಿಚ್ಚ ಸುದೀಪ್ ಶಾಕ್ ನೀಡಿದ್ದಾರೆ, ಈ ವಾರ ಒಬ್ಬರಲ್ಲ, ಇಬ್ಬರು ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಘೋಷಿಸಿದರು. ಅಂತಿಮವಾಗಿ ರಜತ್ ಅವರನ್ನು ಮನೆಯಲ್ಲೇ ಉಳಿಸಿ, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ ಎಂದು ಘೋಷಿಸಲಾಯಿತು.
ಧ್ರುವಂತ್ ಅವರು ಕಳೆದ ಎರಡು ವಾರಗಳಿಂದಲೂ ಮನೆಯಿಂದ ಹೊರಹೋಗಲು ಹಾತೊರೆಯುತ್ತಿದ್ದರು. ಹಾಗಾಗಿ ಅವರ ಎಲಿಮಿನೇಷನ್ ಬಗ್ಗೆ ಮನೆಯವರಿಗೆ ಹೆಚ್ಚಿನ ಆಘಾತವಾಗಲಿಲ್ಲ. ಆದರೆ, ರಕ್ಷಿತಾ ಶೆಟ್ಟಿ ಅವರ ಅನಿರೀಕ್ಷಿತ ಎಲಿಮಿನೇಷನ್ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ದೊಡ್ಡ ಶಾಕ್ ನೀಡಿತು.
ಮಾಳು, ರಘು ಮತ್ತು ಇನ್ನೂ ಕೆಲವರು ಕಣ್ಣೀರು ಹಾಕಿದರು. ಇನ್ನೂ ಅಶ್ವಿನಿ ಕಣ್ಣೀರಿಡುತ್ತಾ ಪದೇ ಪದೇ ರಕ್ಷಿತಾಗೆ ಕ್ಷಮೆ ಕೇಳಿದರು. ಗಿಲ್ಲಿ, ನಾನು ಯಾರಿಗೂ ಕಣ್ಣೀರು ಹಾಕಿದವನಲ್ಲ, ಆದರೆ ರಕ್ಷಿತಾ ಹೋಗಿದ್ದು ಬೇಸರವಾಯ್ತು. ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ಭಾವುಕರಾದರು. ರಜತ್, ನಾನು ಕಳೆದ ಸೀಸನ್‌ನಲ್ಲಿಯೂ ಸಹ ಯಾರನ್ನೂ ಹಚ್ಚಿಕೊಂಡಿರಲಿಲ್ಲ, ಆದರೆ ರಕ್ಷಿತಾರನ್ನು ಬಹಳ ಹಚ್ಚಿಕೊಂಡಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು. ರಘು ಅಂತೂ ರಕ್ಷಿತಾ ಹೋಗುವಾಗ, ಅವರ ನೆನಪಿಗಾಗಿ ತಮ್ಮ ಆಭರಣವನ್ನೇ ಉಡುಗೊರೆಯಾಗಿ ನೀಡಿದರು. ರಕ್ಷಿತಾಗೆ ಸಹ ಬಿಗ್‌ಬಾಸ್ ನಿರ್ಣಯ ಶಾಕ್ ತಂದಿತು. ಕಣ್ಣೀರು ತಡೆಯಲಾಗದಿದ್ದರೂ, ಗಟ್ಟಿ ಮನಸ್ಸು ಮಾಡಿ ಮನೆಯಿಂದ ಹೊರಬಂದರು.
ಈ ಡಬಲ್ ಎಲಿಮಿನೇಷನ್‌ನ ಹಿಂದೆ ದೊಡ್ಡದೊಂದು ತಿರುವು ಅಡಗಿದೆ. ಮೂಲಗಳ ಪ್ರಕಾರ ಮತ್ತು ಕಿಚ್ಚ ಸುದೀಪ್ ಅವರ ಮಾತಿನ ಸೂಚನೆಯ ಪ್ರಕಾರ, ಈ ವಾರ ಓಟಿಂಗ್ ಲೈನ್ಸ್ ತೆರೆದಿರಲೇ ಇಲ್ಲ. ಅಂದರೆ, ಈ ವಾರ ವಾಸ್ತವವಾಗಿ ಯಾರೂ ಎಲಿಮಿನೇಟ್ ಆಗುವಂತಿರಲಿಲ್ಲ.
ಬಿಗ್‌ಬಾಸ್ ಬೇಕೆಂದೇ ನಾಟಕೀಯ ತಿರುವು ನೀಡಲು ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿಯನ್ನು ಮನೆಯಿಂದ ತಾತ್ಕಾಲಿಕವಾಗಿ ಹೊರಗೆ ಕರೆಸಿಕೊಂಡಿದ್ದಾರೆ. ಆದರೆ, ಅವರನ್ನು ಎಲ್ಲಿ ಇರಿಸಲಿದ್ದಾರೆ ಮತ್ತು ಯಾವಾಗ ಮತ್ತೆ ಮನೆಯೊಳಗೆ ಕಳುಹಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.
ಸುದೀಪ್ ಈ ಬಗ್ಗೆ ಸುಳಿವು ನೀಡಿದ್ದು, ಒಳ್ಳೆಯ ಸಮಯದಲ್ಲಿ ಮತ್ತೆ ಅವರನ್ನು ಮನೆಯ ಒಳಗೆ ಕಳುಹಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಇಬ್ಬರನ್ನು ಸೀಕ್ರೆಟ್ ರೂಮ್ಗೆ ಕಳುಹಿಸಿ, ಮನೆಯೊಳಗಿನ ಇತರ ಸದಸ್ಯರ ಆಟದ ಮತ್ತು ಮಾತುಕತೆಗಳ ಬಗ್ಗೆ ಕಣ್ಗಾವಲು ಇರಿಸುವ ಸಾಧ್ಯತೆ ಇದೆ.
