ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಪ್ರತಿ ವರ್ಷ ವರ್ಷದ ಕೊನೆಯಲ್ಲಿ ಆರಂಭವಾಗುತ್ತಿದ್ದ ಈ ಜನಪ್ರಿಯ ಕಾರ್ಯಕ್ರಮ ಈ ಬಾರಿ ಒಂದು ತಿಂಗಳು ಮುಂಚಿತವಾಗಿಯೇ ಆರಂಭವಾಗಲಿದ್ದು, ಶೋಗೆ ಸಂಬಂಧಿಸಿದ ಮೊದಲ ಪ್ರೋಮೊ ಬಿಡುಗಡೆಯಾಗಿದೆ. ಪ್ರೋಮೊ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಕಲರ್ಸ್ ಕನ್ನಡ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಎಂದಿನಂತೆ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೃಹತ್ ಬಾಗಿಲು ತೆರೆದು ಖಡಕ್ ಎಂಟ್ರಿ ಕೊಡುವ ಸುದೀಪ್, ತಮ್ಮ ವಿಶಿಷ್ಟ ಧ್ವನಿಯಲ್ಲಿ ಹೇಳುವ ಸಂಭಾಷಣೆ ಪ್ರೇಕ್ಷಕರ ಗಮನ ಸೆಳೆದಿದೆ.
ನಮಸ್ತೆ ಕರ್ನಾಟಕ, the Bigg wait is over!#BiggBossKannada13 #BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo @KicchaSudeep pic.twitter.com/Bqmg4Y8hs2
— Colors Kannada (@ColorsKannada) August 2, 2026
“ಕರ್ನಾಟಕದ ಜನ ಯಾರಿಗೂ ಕಾದಿದ್ದು ಇತಿಹಾಸದಲ್ಲೇ ಇಲ್ಲ. ಆದರೆ ಪ್ರತಿ ವರ್ಷ ಒಂದು ವಿಷಯಕ್ಕಾಗಿ ಮಾತ್ರ ಕಾಯುತ್ತಾರೆ” ಎಂಬ ಡೈಲಾಗ್ ಮೂಲಕ ಪ್ರೋಮೊ ಆರಂಭವಾಗುತ್ತದೆ. ಬಳಿಕ “ಒಂದೇ ಮನೆ… ಒಂದು ಅವಕಾಶ… ಕೋಟಿ ಕನಸುಗಳು… ಮತ್ತೆ ಶುರು ಮಾಡೋಣ್ವ!” ಎಂದು ಹೇಳುವ ಮೂಲಕ ಹೊಸ ಸೀಸನ್‌ಗೆ ಅಧಿಕೃತ ಚಾಲನೆ ನೀಡಿದ್ದಾರೆ.
ಪ್ರೋಮೊ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್, ಕಾಮೆಂಟ್‌ಗಳು ಹಾಗೂ ಶೇರ್‌ಗಳು ಹರಿದುಬಂದಿವೆ. ಆದರೆ, ಈ ವೇಳೆ ವೀಕ್ಷಕರು ನಿರೀಕ್ಷಿಸಿದ್ದ ಪ್ರಮುಖ ಮಾಹಿತಿ ಅಂದರೆ ಶೋ ಆರಂಭದ ದಿನಾಂಕವನ್ನು ಮಾತ್ರ ಪ್ರಕಟಿಸಲಾಗಿಲ್ಲ. ಇದರಿಂದ ಅಭಿಮಾನಿಗಳು ಸ್ವಲ್ಪ ನಿರಾಸೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಪ್ರಸಾರ ದಿನಾಂಕ ಘೋಷಿಸುವಂತೆ ಒತ್ತಾಯಿಸಿದ್ದಾರೆ.
ಈ ಬಾರಿ ಬಿಗ್ ಬಾಸ್ ಕನ್ನಡ 13 ಹಲವು ಹೊಸ ಅಚ್ಚರಿಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ನೀಡಲಾಗುತ್ತಿದೆ. ಜೊತೆಗೆ ಸಿನಿಮಾ, ಕಿರುತೆರೆ ಹಾಗೂ ಸಾಮಾಜಿಕ ಜಾಲತಾಣಗಳ ಜನಪ್ರಿಯ ಸೆಲೆಬ್ರಿಟಿಗಳು ಕೂಡ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ.
ಕಿಚ್ಚ ಸುದೀಪ್ ಈ ಬಾರಿಯೂ ಕಾರ್ಯಕ್ರಮದ ನಿರೂಪಕರಾಗಿ ಮುಂದುವರಿಯುತ್ತಿದ್ದು, ಅವರ ನಿರೂಪಣೆಯೇ ಶೋನ ಪ್ರಮುಖ ಆಕರ್ಷಣೆಯಾಗಿದೆ. ಹೊಸ ಟಾಸ್ಕ್‌ಗಳು, ಹೊಸ ನಿಯಮಗಳು ಹಾಗೂ ವಿಭಿನ್ನ ಸ್ಪರ್ಧಿಗಳೊಂದಿಗೆ ಈ ಬಾರಿಯ ಸೀಸನ್ ಮತ್ತಷ್ಟು ರೋಚಕವಾಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
