ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳು ಈಗ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಈಗಲ್ಟನ್ ರೆಸಾರ್ಟ್‌ಗೆ ರಹಸ್ಯವಾಗಿ ಸ್ಥಳಾಂತರಗೊಂಡಿದ್ದಾರೆ. ಎಲ್ಲಾ 17 ಸ್ಪರ್ಧಿಗಳಿಗೂ ಪ್ರತ್ಯೇಕ ಕೋಣೆಗಳನ್ನು ನಿಗದಿ ಮಾಡಲಾಗಿದ್ದು, ಅವರ ಮೇಲೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಸ್ಪರ್ಧಿಗಳು ಹೋಟೆಲ್ ಸಿಬ್ಬಂದಿಯೊಂದಿಗೆ ಮಾತನಾಡಬಾರದು, ಟಿವಿ ನೋಡಬಾರದು, ಹೊರಗೆ ಹೋಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನೀರು, ಊಟ ಮತ್ತು ತಿಂಡಿ ಎಲ್ಲವೂ ಕೋಣೆಗಳಲ್ಲೇ ವಿತರಿಸಲಾಗುವುದು. ರೂಂ ಬಾಯ್‌ಗಳೊಂದಿಗೆ ಕೂಡ ಮಾತನಾಡುವ ಅನುಮತಿ ಇಲ್ಲ. ಎಲ್ಲಾ 17 ಕೋಣೆಗಳಲ್ಲಿರುವ ಟಿವಿ ಕನೆಕ್ಷನ್‌ಗಳನ್ನ ಕತ್ತರಿಸಲಾಗಿದೆ. ರೆಸಾರ್ಟ್‌ಗೆ ಸ್ಥಳಾಂತರಗೊಳ್ಳುವಾಗ ಸ್ಪರ್ಧಿಗಳು ತೀವ್ರ ಮುಜುಗರಕ್ಕೀಡಾಗಿದ್ದರು. ಅವರ ಮುಖಗಳನ್ನು ಕವರ್ ಮಾಡಿಕೊಂಡಿದ್ದರು.
300 ಕೋಟಿ ರೂಪಾಯಿ ವ್ಯವಹಾರವನ್ನು ಗುರಿ ಹೊಂದಿದ್ದ ಬಿಗ್ ಬಾಸ್ ಶೋಗೆ ಡಿಸಿ ಆದೇಶ ಶಾಕ್ ನೀಡಿದೆ. ಆಯೋಜಕರು ಈಗಾಗಲೇ ಕಾನೂನು ತಜ್ಞರನ್ನು ಸಂಪರ್ಕಿಸಿದ್ದಾರೆ ಮತ್ತು ನಾಳೆ ಹೈಕೋರ್ಟ್ನಲ್ಲಿ ತುರ್ತು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಕಲರ್ಸ್ ಗ್ರೂಪ್ ಮತ್ತು ಎಂಡೆಮೋಲ್ ಕಂಪನಿಗಳು ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ದಾಖಲಿಸಲಿರುವುದಾಗಿ ತಿಳಿದುಬಂದಿದೆ.