ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ಧ್ರುವಂತ್ ಹಾಗೂ ರಕ್ಷಿತಾ ನಡುವೆ ಪದೇ ಪದೇ ನಡೆಯುತ್ತಿರುವ ವಾಗ್ವಾದ ಇದೀಗ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಮನೆಯಲ್ಲಿ ಆರಂಭದಿಂದಲೂ ಇವರಿಬ್ಬರ ನಡುವೆ ಬಾಡಿಂಗ್ ಸರಿಯಾಗಿ ಇಲ್ಲ. ಹಲವು ಸಂದರ್ಭಗಳಲ್ಲಿ ಧ್ರುವಂತ್ ಅವರು ರಕ್ಷಿತಾಳ ಬಗ್ಗೆ ವ್ಯಂಗ್ಯ ಮಾತು ಆಡಿರುವುದು, ರಕ್ಷಿತಾ ಇದು ಸುದೀಪ್ ಅವರ ಮುಂದೆಯೇ ಬೇಸರವಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲವೂ ಮನೆಮಂದಿಯ ಗಮನ ಸೆಳೆದಿದೆ. ಈಗ, ಕ್ಯಾಪ್ಟನ್ಸಿ ಟಾಸ್ಕ್ ವೇಳೆ ನಡೆದ ಘಟನೆ ಮತ್ತೊಮ್ಮೆ ಇವರಿಬ್ಬರ ನಡುವೆ ಕಿರಿಕ್ ನಡೆದಿದೆ.
ಕ್ಯಾಪ್ಟನ್ಸಿ ಟಾಸ್ಕ್— ಜೋಡಿಗಳ ಆಟ
ಬಿಗ್ ಬಾಸ್ ಈ ವಾರ ಸ್ಪರ್ಧಿಗಳನ್ನು ಜೋಡಿಗಳಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಿಸಿದ್ದಾರೆ. ಗಿಲ್ಲಿ – ಕಾವ್ಯ, ಮಾಳು – ರಕ್ಷಿತಾ, ರಘು – ಅಶ್ವಿನಿ, ಸೂರಜ್ – ರಾಶಿಕಾ, ಅಭಿ – ಸ್ಪಂದನಾ, ರಜತ್ – ಚೈತ್ರಾ ಜೋಡಿಗಳಾಗಿದ್ದಾರೆ.
ಮೊದಲ ಸುತ್ತಿನಲ್ಲಿ ರಾಶಿಕಾ – ಸೂರಜ್ ಜೋಡಿ ಹೊರಬಿದ್ದಿದ್ದು, ಉಳಿದ ಸ್ಪರ್ಧಿಗಳು ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ತಿಳಿಸಿದ್ದಾರೆ. ಈ ವಾರದ ಕ್ಯಾಪ್ಟನ್ಸಿ ಅಭ್ಯರ್ಥಿಗಳಾಗಲು ಅತಿ ಹೆಚ್ಚು ಅಂಕ ಪಡೆಯಬೇಕಾಗುತ್ತದೆ. ಈವರೆಗಿನ ಟಾಸ್ಕ್‌ಗಳಲ್ಲಿ ಇದೇ ಅಂತಿಮ ನಿರ್ಣಾಯಕ ಟಾಸ್ಕ್.
ಟಾಸ್ಕ್ ಉಸ್ತುವಾರಿ ಧ್ರುವಂತ್ ಮತ್ತು ಧನುಷ್ ಅವರ ಕೈಯಲ್ಲಿ ಇದ್ದು, ಎಲ್ಲರೂ ನಿಯಮ ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಇವರದ್ದು. ಈ ಸಂದರ್ಭದಲ್ಲಿಯೇ ರಕ್ಷಿತಾಳ ತಂಡದ ವಿರುದ್ಧ ಧ್ರುವಂತ್ ಸೂಚನೆ ನೀಡಿದ್ದು, ಇಡೀ ವಿಚಾರ ಬಿಗ್‌ಬಾಸ್ ಮನೆಯನ್ನು ಗದ್ದಲ ಎಬ್ಬಿಸಿದೆ.
ಧ್ರುವಂತ್ ಆರೋಪಿಸಿದ ತಪ್ಪಿಗೆ ರಕ್ಷಿತಾ ಕೋಪ
ಟಾಸ್ಕ್ ವೇಳೆ ರಕ್ಷಿತಾಳ ತಂಡ ರೂಲ್ಸ್ ಬ್ರೇಕ್ ಮಾಡಿದೆ ಎಂದು ಧ್ರುವಂತ್ ಹೇಳಿದ ಕ್ಷಣವೇ ರಕ್ಷಿತಾ ಕೋಪ ಗದರಿದ್ದಾರೆ. ತನ್ನ ಕಡೆ ಧ್ರುವಂತ್ ಅನವಶ್ಯಕವಾಗಿ ತೊಂದರೆ ಕೊಡುತ್ತಿದ್ದಾರೆ ಎಂಬ ಭಾವನೆಯಲ್ಲಿ ರಕ್ಷಿತಾ ಆಟವನ್ನು ಬಿಟ್ಟು, ಸ್ವಿಮ್ಮಿಂಗ್ ಪೂಲ್ ಬಳಿ ಕೂಗಾಡಿ ಆಕ್ರೋಶ ಹೊರಹಾಕಿದರು. ಕೈಯಲ್ಲಿದ್ದ ಕೋಲನ್ನು ನೀರಿಗೆ ಬಡಿಯುತ್ತಾ ತಮ್ಮ ಅಸಮಾಧಾನವನ್ನು ಬಲವಾಗಿ ವ್ಯಕ್ತಪಡಿಸಿದರು.
ಮನೆಯ ಸ್ಪರ್ಧಿಗಳು ರಕ್ಷಿತಾಳನ್ನು ಸಮಾಧಾನಪಡಿಸಲು ಮುಂದಾದರೂ, ಅವರು ಧ್ರುವಂತ್ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಧ್ರುವಂತ್- “ನ್ಯಾಯದ ಆಟ”ಗೆ ಮೆಚ್ಚುಗೆ
ಇದಕ್ಕೆ ವಿರುದ್ಧವಾಗಿ, ನಿನ್ನೆಯ ರಿಂಗ್ ಟಾಸ್ಕ್‌ನಲ್ಲಿ ಧ್ರುವಂತ್ ಮಾಡಿದ “ನ್ಯಾಯದ ಆಟ” ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಪರ್ಧಿಗಳಿಗೆ ಯಾವುದೇ ಅನ್ಯಾಯ ಆಗಬಾರದೆಂದು, ಕಣ್ಣು ಮುಚ್ಚಿಕೊಂಡೇ ರಿಂಗ್ ಎಸೆದು ಟಾಸ್ಕ್ ನಡೆಸಿದ ಧ್ರುವಂತ್ ಅವರ ಪ್ರಾಮಾಣಿಕತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. “ಕಿಚ್ಚನ ಚಪ್ಪಾಳೆ ಇದೇ ವಾರ ಧ್ರುವಂತ್‌ಗೆ ಸಿಗಬೇಕು” ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಕಳೆದ ವಾರದ ವಿವಾದ: ಧ್ರುವಂತ್‌ಗೆ ಬಿದ್ದ ಬಿರುದುಗಳು
ಕಳೆದ ವಾರದ ವೀಕೆಂಡ್‌ಗೆ ಧ್ರುವಂತ್ ಹಲವು ಟೀಕೆಗಳಿಗೆ ಗುರಿಯಾದರು. ಕೆಲವರು ಅವರನ್ನು ‘ಊಸರವಳ್ಳಿ’, ಕೆಲವರು ‘ಕಪಟಿ’ ಎಂದು ಕರೆಯುವಂತಹ ಬಿರುದುಗಳು ಸಿಕ್ಕಿತ್ತು. ಇದರಿಂದ ಕಂಗಾಲಾದ ಧ್ರುವಂತ್ ಬಿಗ್‌ಬಾಸ್ ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದಾರೆ. ಆದರೆ ಸುದೀಪ್ ಅವರು ಅದಕ್ಕೆ ಒಪ್ಪದೇ ಧ್ರುವಂತ್‌ಗೆ ಮನವಿ, ಸಲಹೆ ನೀಡಿದ್ದರು. ನಂತರವೂ ಧ್ರುವಂತ್ ಬಿಗ್‌ಬಾಸ್ ಬಳಿ ಮನೆಯಿಂದ ಹೊರ ಕಳುಹಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಈ ಹಿಂದಿನ ಒತ್ತಡ, ಸ್ಪರ್ಧಿಗಳ ಟೀಕೆಗಳು, ಹಾಗೂ ರಕ್ಷಿತಾ ಜೊತೆ ನಿರಂತರ ಜಗಳ ಧ್ರುವಂತ್ ಮೇಲೆ ಒತ್ತಡ ಹೆಚ್ಚಿಸಿದೆ. ಅದೇ ಸಮಯದಲ್ಲಿ, ಕೆಲವು ಟಾಸ್ಕ್‌ಗಳಲ್ಲಿ ಅವರ ನಿರ್ವಹಣೆ ವೀಕ್ಷಕರ ಮೆಚ್ಚುಗೆ ಪಡೆದಿದೆ.
