ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಗಳ ನಡುವಿನ ಸಂಬಂಧಗಳು ಮತ್ತು ಡ್ರಾಮಾಗಳು ಪ್ರೇಕ್ಷಕರನ್ನು ಸದಾ ಕುತೂಹಲದಲ್ಲಿಟ್ಟಿವೆ. ಈ ಸೀಸನ್‌ನ ಅಚ್ಚರಿಯ ಸ್ಪರ್ಧಿ ಎಂದರೆ ರಕ್ಷಿತಾ ಶೆಟ್ಟಿ. ಆರಂಭದಲ್ಲೇ ಬಿಗ್ ಬಾಸ್ ಮನೆಯಿಂದ ಹೊರಬಂದು ಮತ್ತೆ ಎಂಟ್ರಿ ಕೊಟ್ಟ ಅವರು, ಸೀಕ್ರೆಟ್ ರೂಮ್‌ನಲ್ಲೂ ಕಾಲ ಕಳೆದರು. ಅವರ ಆಟದ ಶೈಲಿ ವಿಭಿನ್ನವಾಗಿದ್ದು, ಇದೀಗ ವೀಕೆಂಡ್ ಎಪಿಸೋಡ್‌ನಲ್ಲಿ ಹೋಸ್ಟ್ ಕಿಚ್ಚ ಸುದೀಪ್ ಅವರ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ರಘು ಜೊತೆ ರಕ್ಷಿತಾ ಶೆಟ್ಟಿ ಬಹಳ ಕ್ಲೋಸ್ ಆಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇವರಿಬ್ಬರ ಜೊತೆಗೆ ಬೇರೆ ಯಾರಾದರೂ ಹತ್ತಿರವಾದರೆ ರಕ್ಷಿತಾಗೆ ಅದು ಇಷ್ಟವಾಗುವುದಿಲ್ಲ ಎನ್ನುವ ಆರೋಪಗಳು ಮನೆ ಒಳಗೆ ಕೇಳಿಬಂದಿವೆ. ಇತ್ತೀಚೆಗೆ ಗಿಲ್ಲಿ ಎದುರು ಇದ್ದ ಬೀನ್ ಬ್ಯಾಗ್‌ಗಳನ್ನು ರಕ್ಷಿತಾ ಬೇರೆ ಕಡೆಗೆ ಸರಿಸಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಯಿತು. ಗಿಲ್ಲಿ ಜೊತೆ ತಾನೊಬ್ಬಳೇ ಕುಳಿತುಕೊಳ್ಳಬೇಕು ಎಂಬ ರೀತಿಯ ಅವರ ನಡೆಗೆ ಸ್ಪರ್ಧಿಗಳಷ್ಟೇ ಅಲ್ಲ, ವೀಕ್ಷಕರೂ ಗಮನಹರಿಸಿದ್ದರು.
ಈ ವಿಷಯವನ್ನು ‘ಕಳಪೆ ಆಯ್ಕೆ’ ಟಾಸ್ಕ್ ವೇಳೆ ರಾಶಿಕಾ ಬಹಿರಂಗವಾಗಿ ಹೇಳಿದ್ದರು. ಇದೇ ಕಾರಣಕ್ಕೆ ರಾಶಿಕಾ ರಕ್ಷಿತಾಗೆ ಕಳಪೆ ಕೂಡ ನೀಡಿದ್ದರು. ಈ ಎಲ್ಲ ಘಟನೆಗಳು ರಕ್ಷಿತಾ ಶೆಟ್ಟಿ ಆಟದಲ್ಲಿ ಪೊಸೆಸಿವ್ ಅಂಶವಿದೆಯೇ ಎಂಬ ಪ್ರಶ್ನೆಯನ್ನು ಎಬ್ಬಿಸಿತ್ತು.
ಸುದೀಪ್ ಪ್ರಶ್ನೆ-ಸ್ಪಷ್ಟ ಸಂದೇಶ
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಈ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ನೇರವಾಗಿ ಮಾತನಾಡಿದ್ದಾರೆ.
“ಗಿಲ್ಲಿ–ರಘು ಜೊತೆ ಯಾರು ಕ್ಲೋಸ್ ಆಗಬಾರದು, ಅದು ರಕ್ಷಿತಾಗೆ ಇಷ್ಟವಾಗಲ್ಲ. ಇಲ್ಲಿ ಸಂಬಂಧಗಳನ್ನು ಕಟ್ಟಿಕೊಂಡು ಮನೆಯನ್ನು ನರಕ ಮಾಡುತ್ತೀರಾ ಅಂದ್ರೆ ನೆನಪಿರಲಿ.. ಸಂಬಂಧಗಳು ಶಾಶ್ವತ ಅಲ್ಲ. ಇದು ಯಾರಪ್ಪನ ಮನೆಯೂ ಅಲ್ಲ” ಎಂದು ಸುದೀಪ್ ಗಂಭೀರವಾಗಿ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಅವರ ಈ ಮಾತುಗಳು ರಕ್ಷಿತಾಗೆ ಮಾತ್ರವಲ್ಲ, ಮನೆಮಂದಿಯೆಲ್ಲರಿಗೂ ಸ್ಪಷ್ಟ ಸಂದೇಶವಾಗಿತ್ತು.
‘ನಾನು ಗೆಲ್ಲಬೇಕು’-ರಕ್ಷಿತಾ ಸ್ಪಷ್ಟ ಗುರಿ
ಇದೇ ಸಂದರ್ಭದಲ್ಲಿ ಸುದೀಪ್, “ನಿಮ್ಮ ಮೂವರಲ್ಲಿ (ರಕ್ಷಿತಾ, ಗಿಲ್ಲಿ, ರಘು) ಯಾರು ಗೆಲ್ಲಬೇಕು?” ಎಂದು ಪ್ರಶ್ನಿಸಿದಾಗ ರಕ್ಷಿತಾ ಯಾವುದೇ ತಡವಿಲ್ಲದೆ, “ಮೊದಲು ನಾನು ಗೆಲ್ಲಬೇಕು” ಎಂದು ಹೇಳಿದ್ದು ಎಲ್ಲರ ಗಮನ ಸೆಳೆಯಿತು. ಈ ಉತ್ತರಕ್ಕೆ ಸುದೀಪ್ ಚಪ್ಪಾಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದರೆ ತಕ್ಷಣವೇ ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದರು. “ಎಲ್ಲರೂ ಇಲ್ಲಿ ನನ್ನ ಅಣ್ಣ, ನನ್ನ ತಂಗಿ ಅಂತ ಸಂಬಂಧ ಕಟ್ಟಿಕೊಂಡಿದ್ದೀರಿ. ಆದರೆ ಬಾಗಿಲು ಓಪನ್ ಆದಾಗ ಹಿಂಗ್ ಅಂತ ಎಲ್ಲರೂ ಹೊರಗೆ ಹೋಗ್ತೀರಾ” ಎಂದು ಸುದೀಪ್ ಹೇಳಿದ್ದಾರೆ..
ಈ ಎಲ್ಲಾ ಘಟನೆಗಳು ಈ ವಾರದ ವೀಕೆಂಡ್ ಎಪಿಸೋಡ್ ಪ್ರೋಮೋದಲ್ಲೇ ಕಾಣಿಸಿಕೊಂಡಿದ್ದು, ಮುಂದಿನ ಎಪಿಸೋಡ್‌ಗಳಲ್ಲಿ ಇನ್ನಷ್ಟು ಸ್ಪೋಟಕ ಕ್ಷಣಗಳು ಎದುರಾಗಲಿವೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.
