ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆ ಈಗ ನಿಜಕ್ಕೂ ರಣರಂಗವಾಗಿದೆ. ಒಂದೇ ಒಂದು ಪದ “ಟೀ ಕೊಬ್ಬು”.. ಧ್ರುವಂತ್ ಅವರ ಬಾಯಿಂದ ಹೊರಬಿದ್ದ ಕೂಡಲೇ ಮನೆ ಮಂದಿ ಸಿಡಿದೆದ್ದರು. ಮನೆಯಲ್ಲಿ ಇದ್ದ ಮೂವರು ಪ್ರಬಲ ಸ್ಪರ್ಧಿಗಳು ಸೂರಜ್, ಕ್ಯಾಪ್ಟನ್ ಧನುಷ್ ಮತ್ತು ಸ್ಪಂದನಾ ಸೋಮಣ್ಣ ಏಕಕಾಲದಲ್ಲಿ ಧ್ರುವಂತ್ ಮೇಲೆ ತಿರುಗಿಬಿದ್ದಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಇತ್ತೀಚಿನ ಪ್ರೋಮೋದಲ್ಲಿ ಈ ಘಟನೆಯ ತೀವ್ರತೆಯನ್ನು ತೋರಿಸುತ್ತಿದೆ.
ಧ್ರುವಂತ್ ಯಾರೋ ಒಬ್ಬರನ್ನು ಉದ್ದೇಶಿಸಿ “ಟೀ ಕೊಬ್ಬು” ಎಂಬ ಪದವನ್ನು ಬಳಸಿದರು. ಇದಕ್ಕೆ ಸೂರಜ್ ತಕ್ಷಣವೇ ಅವರು ಧ್ರುವಂತ್ ಬಳಿ ಬಂದು ಗದ್ದಲ ಎಬ್ಬಿಸಿದರು. “ಬಾಯಿ ಮೇಲೆ ಸ್ವಲ್ಪ ಕಂಟ್ರೋಲ್ ಇಟ್ಟುಕೊಳ್ಳಿ ಸಾರ್!.. ಏನು ಈ ‘ಟೀ ಕೊಬ್ಬು’ ಅಂತ? ಇದೇನು ನಿಮ್ಮ ತಂದೆ ಮನೆ ಅಂತ ಅಂದುಕೊಂಡಿದ್ದೀರಾ? ಬಾಯಿಗೆ ಹಿಡಿತ ಇರಲಿ!”ಎಂದರು.
ಆದರೆ ಈ ಗಲಾಟೆ ಇಲ್ಲಿಗೇ ನಿಲ್ಲಲಿಲ್ಲ. ಮನೆಯ ಹೊಸ ಕ್ಯಾಪ್ಟನ್ ಧನುಷ್ ಅವರು ಸಹ ಅಖಾಡಕ್ಕಿಳಿದರು. “ನೀನೇನು ದಬಾಯಿಸೋಕ್ಕೆ ಆಗಲ್ಲ. ಮೊದಲು ನೆಟ್ಟಗೆ ಮಾತನಾಡೋದನ್ನ ಕಲಿ!” ಎಂದು ಧ್ರುವಂತ್‌ಗೆ ನೇರವಾಗಿ ಎಚ್ಚರಿಕೆ ನೀಡಿದರು. ಕ್ಯಾಪ್ಟನ್ ಆಗಿ ಆಯ್ಕೆಯಾಗಿ ಒಂದೇ ವಾರ ಕಳೆದಿಲ್ಲ, ಆದರೆ ಧನುಷ್ ಅವರೇ ಜಗಳದಲ್ಲಿ ಭಾಗಿಯಾಗಿರುವುದು ಆಶ್ಚರ್ಯ ಮೂಡಿಸಿದೆ.
ಇದಕ್ಕೆ ಸ್ಪಂದನಾ ಸೋಮಣ್ಣ ಅವರು, ತಾವೇ ಧ್ರುವಂತ್ ಬಳಿ ಬಂದು, “ಹೇಳೋದನ್ನ ಕೇಳಿಸ್ಕೋ. ಇದೆಲ್ಲಾ ಬೇಡ ಧ್ರುವಂತ್…” ಎಂದು ಕಟ್ಟುನಿಟ್ಟಾಗಿ ವಾರ್ನಿಂಗ್ ಕೊಟ್ಟರು. ಮೂರು ದಿಕ್ಕುಗಳಿಂದ ಏಕಕಾಲದಲ್ಲಿ ದಾಳಿ ನಡೆದಿದ್ದರಿಂದ ಧ್ರುವಂತ್ ಸ್ವಲ್ಪ ಹಿಂದೆ ಸರಿದಂತೆ ಕಾಣುತ್ತಿದ್ದಾರೆ. ಉಳಿದ ಸ್ಪರ್ಧಿಗಳು ಈ ಮೂವರನ್ನು ಶಾಂತಗೊಳಿಸಲು ಮುಂದಾಗಿದ್ದಾರೆ.
ಇದೇ ಸಮಯದಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಆಗಿ ಬಂದಿರುವ ತ್ರಿವಿಕ್ರಮ್, ರಜತ್ ಉಳಿದ ಆತಿಥೇಯರು ಮೂಕ ಪ್ರೇಕ್ಷಕರಂತೆ ಕುಳಿತು ಈ ಡ್ರಾಮಾವನ್ನೆಲ್ಲ ನೋಡುತ್ತಿದ್ದಾರೆ. ಅವರ ಮುಖದಲ್ಲಿ ಒಂದೇ ಭಾವ “ಇದ್ಯಾವ್ ಊರ ಜಗಳ ಇದು?” ಎಂಬಂತೆ ನೋಡುತ್ತಿದ್ದರು.
ಇನ್ನೊಂದೆಡೆ ಅಡುಗೆಮನೆಯಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಶಾಂತವಾಗಿ ಕುಳಿತು ಮಾತಾಡುತ್ತಿದ್ದರು. ಅಶ್ವಿನಿ ನಗುತ್ತಾ ಜಾಹ್ನವಿಗೆ ಹೇಳಿದ್ದು, “ನಾನು ಆಡಬೇಕಿದ್ದ ಎಲ್ಲ ಜಗಳವನ್ನ 8 ವಾರದಲ್ಲೇ ಆಡಿ ಮುಗಿಸಿದ್ದೇನೆ. ಇವರು ಈಗ ಶುರು ಮಾಡಿದ್ದಾರೆ!” ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಈ ಘಟನೆಯಿಂದ ಮನೆಯಲ್ಲಿ ಈಗ ಎರಡು ಗುಂಪುಗಳು ಸ್ಪಷ್ಟವಾಗಿ ಕಾಣುತ್ತಿವೆ. ಧ್ರುವಂತ್ ಒಬ್ಬಂಟಿಗ ಆಗಿ ಕಾಣುತ್ತಿದ್ದಾರೆ.
ಇಂದು ಸಂಜೆ ಪ್ರಸಾರವಾಗುವ ಸಂಚಿಕೆಯಲ್ಲಿ ಈ ಜಗಳದ ಸಂಪೂರ್ಣ ಚಿತ್ರಣ, ಧ್ರುವಂತ್ ನಿಜವಾಗಿಯೂ ಯಾರನ್ನು “ಟೀ ಕೊಬ್ಬು” ಎಂದರು, ಅದು ಯಾಕೆ ಇಷ್ಟೊಂದು ದೊಡ್ಡ ವಿವಾದವಾಯಿತು ಎಂಬುದು ತಿಳಿಯಲಿದೆ.
