ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ದಿನದಿಂದ ದಿನಕ್ಕೆ ಡ್ರಾಮಾ ಜೋರಾಗುತ್ತಲೇ ಇದೆ. ಈ ವಾರ ಮನೆಯ ಕ್ಯಾಪ್ಟನ್ ಆಗಿ ಗಿಲ್ಲಿ ನಟ (Gilli Nata) ಆಯ್ಕೆಯಾಗಿದ್ದು, ಅವರು ಅಧಿಕಾರಕ್ಕೆ ಬಂದ ತಕ್ಷಣವೇ ತಮ್ಮ ರೂಲ್ಸ್ ಅನ್ನು ಕಠಿಣವಾಗಿ ಜಾರಿಗೊಳಿಸಲು ಶುರು ಮಾಡಿದ್ದಾರೆ. ಆದರೆ ಗಿಲ್ಲಿಯ ಈ ಶಿಸ್ತು ಕ್ರಮಕ್ಕೆ ಅಶ್ವಿನಿ ಗೌಡ (Ashwini Gowda) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಇಬ್ಬರ ಮಧ್ಯೆ ಭಾರಿ ವಾಗ್ವಾದ ನಡೆದಿದೆ.
ಹೊಸ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಗಿಲ್ಲಿ-ಅಶ್ವಿನಿ ಜಗಳವೇ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಕ್ಯಾಪ್ಟನ್ ಆದ ನಂತರ ಗಿಲ್ಲಿ ಮನೆಯ ಕೆಲಸಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಯಾರೇ ಆಗಲಿ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬಿಡುವುದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
“ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತೀನಿ!”
ಕಿಚನ್ ಕ್ಲೀನಿಂಗ್ ವಿಚಾರವೇ ಈ ಜಗಳಕ್ಕೆ ಮುಖ್ಯ ಕಾರಣ. ಗಿಲ್ಲಿ, “ಕಿಚನ್ ಕ್ಲೀನ್ ಮಾಡಿ ಮುಗಿಸಿ, ನಂತರ ಮಲಗಿರಿ” ಎಂದು ಅಶ್ವಿನಿಗೆ ಸೂಚನೆ ನೀಡಿದ್ದಾರೆ. ಆದರೆ ಅಶ್ವಿನಿ ಅವರಿಗೆ ತುಂಬಾ ಸುಸ್ತಾಗಿದೆ, ಬೆಳಿಗ್ಗೆ ಮಾಡ್ತೀನಿ ಎಂದು ಉತ್ತರಿಸಿದ್ದಾರೆ. ಇದರಿಂದ ಕೋಪಗೊಂಡ ಗಿಲ್ಲಿ, “ಹಾರೆ ತೆಗೆದುಕೊಂಡು ಅಗೆಯಕ್ಕೇನು ಹೋಗಿದ್ರಾ? ಮನೆ ಕೆಲಸ ಅಂದ್ರೆ ಮಾಡಲೇಬೇಕು” ಎಂದು ಕಠಿಣವಾಗಿ ಮಾತನಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ, “ನಿಧಾನಕ್ಕೆ ಮಾತಾಡು, ಕ್ಯಾಪ್ಟನ್ ಅಂತ ಎರಡು ಕೊಂಬು ಬಂದಿದ್ಯಾ?” ಎಂದು ಪ್ರಶ್ನಿಸಿದ್ದಾರೆ. ಈ ಮಾತು ಗಿಲ್ಲಿಗೆ ಇನ್ನಷ್ಟು ಕೋಪ ತರಿಸಿದ್ದು, “ನೀನು ಕ್ಯಾಪ್ಟನ್ ಆಗಿ ತೋರಿಸು” ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ಅಲ್ಲದೇ, ಕೆಲಸ ಮುಗಿಸದೇ ಮಲಗುವುದಕ್ಕೆ ಬಿಡಲ್ಲ ಎಂದು ಸವಾಲ್ ಕೂಡ ಹಾಕಿದ್ದಾರೆ. ಪ್ರೋಮೋದಲ್ಲಿ ಕಾಣುವಂತೆ, ಅಶ್ವಿನಿ ಮಲಗಿರುವಾಗಲೂ ಗಿಲ್ಲಿ ಜೋರಾಗಿ ಸೌಂಡ್ ಮಾಡಿ ಎಬ್ಬಿಸಿ ತೊಂದರೆ ಕೊಟ್ಟಿದ್ದಾರೆ.
ಗಿಲ್ಲಿ ಶಿಸ್ತುನಾ?
ಗಿಲ್ಲಿಯ ಈ ಕ್ಯಾಪ್ಟನ್‌ಗಿರಿ ಬಗ್ಗೆ ಪ್ರೇಕ್ಷಕರು ಎರಡು ಗುಂಪಾಗಿದ್ದಾರೆ. ಕೆಲವರು “ಕ್ಯಾಪ್ಟನ್ ಅಂದ್ರೆ ಹೀಗಿರಬೇಕು, ಡಿಸಿಪ್ಲಿನ್ ಮುಖ್ಯ” ಎಂದು ಗಿಲ್ಲಿಯನ್ನು ಸಪೋರ್ಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು “ಅವಶ್ಯಕತೆಗಿಂತ ಜಾಸ್ತಿ ಒತ್ತಡ ಹಾಕ್ತಿದ್ದಾರೆ” ಎಂದು ಟೀಕೆ ಮಾಡುತ್ತಿದ್ದಾರೆ. ಅಶ್ವಿನಿಯ ಪ್ರತಿಕ್ರಿಯೆಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡಬಲ್ ಎಲಿಮಿನೇಶನ್ ಶಾಕ್: ಮಾಳು ಮನೆಯಿಂದ ಔಟ್
ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಶನ್ ನಡೆದಿದೆ. ಶನಿವಾರದ ಎಪಿಸೋಡ್‌ನಲ್ಲಿ ಸೂರಜ್ ಮನೆಯಿಂದ ಹೊರ ನಡೆದರೆ, ಭಾನುವಾರ ಸ್ಪಂದನಾ ಹಾಗೂ ಮಾಳು ನಿಪನಾಳ ಡೇಂಜರ್ ಝೋನ್‌ನಲ್ಲಿ ಉಳಿದಿದ್ದರು. ಅಂತಿಮವಾಗಿ ಮಾಳು ನಿಪನಾಳ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಮಾಳು ಬಗ್ಗೆ ಮಾತನಾಡಿದ ಗಿಲ್ಲಿ, “ಅವರ ಬಗ್ಗೆ ಇನ್ನೂ ಕ್ಲಾರಿಟಿ ಸಿಗಲಿಲ್ಲ” ಎಂದಿದ್ದಾರೆ. ಧನುಷ್ ಕೂಡ “ಮಾಳು ಸ್ಟ್ಯಾಂಡ್ ತೆಗೆದುಕೊಂಡಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತೂ ಡಬಲ್ ಎಲಿಮಿನೇಶನ್ ಮನೆಯವರಿಗೆ ಶಾಕ್ ನೀಡಿದೆ.
ಗಿಲ್ಲಿ-ಮನೆಮಂದಿಯ ಫೇವರೆಟ್ ಕ್ಯಾಪ್ಟನ್
ಗಿಲ್ಲಿ ನಟನ ಕಾಮಿಡಿ, ಸ್ಟ್ರೈಟ್ ಫಾರ್ವರ್ಡ್ ನಡವಳಿಕೆ ಮನೆಮಂದಿಗೂ, ಪ್ರೇಕ್ಷಕರಿಗೂ ಫೇವರೆಟ್ ಆಗಿದೆ. “ಗಿಲ್ಲಿಯೇ ನಮ್ಮ ಫೇವರೆಟ್ ಕ್ಯಾಪ್ಟನ್” ಎಂದು ಹೆಚ್ಚಿನವರು ವೋಟ್ ಹಾಕಿದ್ದು, ಅದೇ ಫಲವಾಗಿ ಈ ವಾರ ಅವರು ಕ್ಯಾಪ್ಟನ್ ಸ್ಥಾನ ಪಡೆದುಕೊಂಡಿದ್ದಾರೆ.
