BBK 12: “ರೂಮ್‌ನಲ್ಲಿ ಕೈ ಹಿಡಿದು ತಿರಗೋದು ನಾನಲ್ಲ!”: ರಕ್ಷಿತಾಗೆ ಅಶ್ವಿನಿ ಗೌಡ ಓಪನ್ ಚಾಲೆಂಜ್

Untitled design 2025 11 04t121119.367

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ವಾಕ್ಸಮರ ಇನ್ನಷ್ಟು ಹೆಚ್ಚಿದೆ. ನಿನ್ನೆಯ ಸಂಚಿಕೆಯಲ್ಲಿ ನಡೆದ ‘ಮಸಿ ಬಳಿಯುವ’ ಟಾಸ್ಕ್‌ ಈ ಜಗಳಕ್ಕೆ ಕಾರಣವಾಯಿತು. ಸ್ಪರ್ಧಿಗಳು ಅರ್ಹರಲ್ಲದ ಇಬ್ಬರಿಗೆ ಮಸಿ ಬಳಿದು ತಮ್ಮ ಅಭಿಪ್ರಾಯ ಹೇಳಬೇಕಿತ್ತು. ಈ ಟಾಸ್ಕ್‌ನಲ್ಲಿ ಎಲ್ಲರೂ ಖಡಕ್‌ ಆಗಿ ಮಾತನಾಡಿದರೂ, ಅಶ್ವಿನಿ ಗೌಡ ಅವರ ಖಾರವಾದ ಟೀಕೆಗಳು ರಕ್ಷಿತಾ ಅವರನ್ನು ಗುರಿಯಾಗಿಸಿದ್ದು, ಮತ್ತೆ ಗಮನ ಸೆಳೆದಿದೆ. ಈ ಘಟನೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವೀಕ್ಷಕರು ಅಶ್ವಿನಿ ಅವರ ಮಾತುಗಳನ್ನು ‘ಕೆಳಮಟ್ಟದ ಆರೋಪ’ ಎಂದು ಟೀಕಿಸುತ್ತಿದ್ದಾರೆ.

ಟಾಸ್ಕ್‌ ಸಂದರ್ಭದಲ್ಲಿ ರಿಷಾ ಅವರು ಹೆಚ್ಚು ಮಸಿ ಬಳಿದವರಲ್ಲಿ ಮುಂಚೂಣಿಯಲ್ಲಿದ್ದರೆ, ಅಶ್ವಿನಿ ಅವರು ರಕ್ಷಿತಾ ಅವರನ್ನು ನೇರವಾಗಿ ಟಾರ್ಗೆಟ್‌ ಮಾಡಿ ಬೇಕಾಬಿಟ್ಟಿ ಮಾತನಾಡಿದರು. “ರಕ್ಷಿತಾ ಮುಗ್ದೆ ಅಲ್ಲ. ಡ್ರಾಮಾ ಕಂಪನಿಗೆ ಅಪ್ಪ ಅಲ್ಲ, ಮುತ್ತಾತ ಇವರು! ಅಷ್ಟು ಡ್ರಾಮಾ ಮಾಡಿಕೊಂಡು ಬಂದಿದ್ದಾರೆ. ರೂಮ್‌ಗಳಲ್ಲಿ ಕೈ ಹಿಡಿದುಕೊಂಡು, 25 ವಯಸ್ಸಿನವರು ಮಕ್ಕಳಂತೆ ಆಡುವುದು ಸರಿಯಲ್ಲ. ದಯವಿಟ್ಟು ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟೇ ವಯಸ್ಸಿನವರು ಹೊರಗೆ ನೋಡುತ್ತಾರೆ” ಎಂದು ಅಶ್ವಿನಿ ಖಡಕ್‌ ಆಗಿ ಹೇಳಿದರು.

ಇದು ಸಾಕಾಗದೇ, ಸಿನಿಮಾ ಮತ್ತು ಯೂಟ್ಯೂಬ್‌ ವಿಷಯಕ್ಕೂ ಎಳೆದೊಯ್ದರು. “ನಾವು ಕಷ್ಟಪಟ್ಟು ಬಂದಿದ್ದೇವೆ. 100ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ನಿನ್ನಂತೆ ಯೂಟ್ಯೂಬ್‌ ಚಾನೆಲ್‌ ಮಾಡಿ ಬಂದಿಲ್ಲ. ನಮ್ಮ ವ್ಯಕ್ತಿತ್ವವನ್ನು ಕಸದ ಬುಟ್ಟಿಗೆ ಹಾಕುವ ಯೋಗ್ಯತೆ ನಿನಗಿಲ್ಲ. ನಿನ್ನಂತಹ ಚಾನೆಲ್‌ ನಾನು 100 ಮಾಡಬಹುದು. ನನ್ನಷ್ಟು ಸಿನಿಮಾ ಮಾಡಿ ತೋರಿಸು! ಇದು ಓಪನ್‌ ಚಾಲೆಂಜ್” ಎಂದು ಅಬ್ಬರಿಸಿದರು.

ಅಶ್ವಿನಿ ಅವರ ಆರೋಪಗಳು ಇಲ್ಲಿಗೆ ನಿಲ್ಲಲಿಲ್ಲ. “ಜೈಲಿಗೆ ಹೋಗಲು ರೆಡಿಯಿರುವ ಹೆಣ್ಣು ನಾನು. ನಿನ್ನಂತೆ ರೂಮ್‌ಗಳಲ್ಲಿ ಒಬ್ಬೊಬ್ಬರ ಕೈ ಹಿಡಿದು ಬಕೆಟ್‌ ಹಿಡಿಯುವ ಕೆಲಸ ನಾನು ಮಾಡುವುದಿಲ್ಲ” ಎಂದು ರಕ್ಷಿತಾ ಅವರ ವೈಯಕ್ತಿಕ ಜೀವನಕ್ಕೆ ಎಳೆತ ತಂದರು. ಇದು ಮನೆಯಲ್ಲೇ ಆಘಾತ ಮೂಡಿಸಿತು ಮತ್ತು ರಕ್ಷಿತಾ ಅವರನ್ನು ಕೆರಳಿಸಿತು.

ರಕ್ಷಿತಾ ಶೆಟ್ಟಿ ಕೂಡ ತಿರುಗೇಟು ನೀಡುತ್ತಾ, “ಇವರ ಮಾತುಗಳಿಗೆ ಹೆಚ್ಚೇನೂ ಹೇಳುವುದಿಲ್ಲ. ಮುಗ್ಧರಿಗೆ ನಾನು ಮುಗ್ಧೆ, ಆದರೆ ರಾಕ್ಷಸಿಗೆ ನಾನು ರಾಕ್ಷಸಿಯೇ! ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗುತ್ತೇನೆ. ಇದು ನನ್ನ ಚಾಲೆಂಜ್” ಎಂದು ಧೀಟಾಗಿ ಉತ್ತರಿಸಿದರು. ಈ ಪರಸ್ಪರ ಚಾಲೆಂಜ್‌ಗಳು ಮನೆಯ ವಾತಾವರಣವನ್ನು ಇನ್ನಷ್ಟು ಬಿಸಿಯಾಗಿಸಿವೆ.

ಈ ಘಟನೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಅಶ್ವಿನಿ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. “ಕೇವಲ 24 ವರ್ಷದಲ್ಲಿ ದೊಡ್ಡ ಮನೆಯ ವೇದಿಕೆ ಸಿಕ್ಕ ರಕ್ಷಿತಾಗೆ ಎಷ್ಟು ಅಹಂಕಾರ ಬೇಕು? ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ವ್ಯಕ್ತಿಯಾಗಿರುವ ರಕ್ಷಿತಾ, ಅಶ್ವಿನಿ ವಯಸ್ಸಿಗೆ ಬಂದಾಗ ಯಾವ ಲೆವೆಲ್‌ಗೆ ಬೆಳೆಯುತ್ತಾಳೆ ಅನ್ನೋ ಅಂದಾಜೇ ಇಲ್ಲ” ಎಂದು ಕಾಮೆಂಟ್‌ಗಳು ಹರಿದಾಡುತ್ತಿವೆ. ಅಶ್ವಿನಿ ಅವರ ಮಾತುಗಳನ್ನು ‘ವೈಯಕ್ತಿಕ ದ್ವೇಷ’ ಮತ್ತು ‘ಕೆಳಮಟ್ಟ’ ಎಂದು ಬಣ್ಣಿಸುತ್ತಿದ್ದಾರೆ.

ಕಳೆದ ವಾರ ಕಾವ್ಯ ಶೈವ ಮತ್ತು ಅಶ್ವಿನಿ ನಡುವೆ ಏಕವಚನ ಜಗಳ ನಡೆದಾಗ ರಕ್ಷಿತಾ ಕಾವ್ಯ ಪರವಾಗಿ ನಿಂತಿದ್ದರು. ಈಗ ಚಪ್ಪಲಿ ವಿವಾದದಲ್ಲಿ ಧನುಷ್‌ ಮತ್ತು ಗಿಲ್ಲಿ ರಕ್ಷಿತಾ ಪರ ಬ್ಯಾಟ್‌ ಬೀಸಿದ್ದಾರೆ. “ರಕ್ಷಿತಾ ಕಾಲು ತೋರಿಸಿ ‘ವೋಟ್‌ ಕೊಟ್ಟರೆ ಚಪ್ಪಲಿಯಲ್ಲಿ ತುಳಿಯುತ್ತೇನೆ’ ಎಂದಿದ್ದರು. ಆದರೆ ಅಶ್ವಿನಿ ಅದನ್ನು ‘ಕಲಾವಿದರಿಗೆ ಕಾಲು ತೋರಿಸಿದಂತೆ’ ಎಂದು ತಿರುಚಿದ್ದಾರೆ” ಎಂದು ಗಿಲ್ಲಿ ಸಮರ್ಥಿಸಿಕೊಂಡರು.

Exit mobile version