ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಇವತ್ತು ಸ್ಪರ್ಧಿಗಳಿಗೆ ನಿಜಕ್ಕೂ ಬಿಗ್ ಶಾಕ್ ಸಿಕ್ಕಿದೆ. ಫ್ಯಾಮಿಲಿ ವೀಕ್‌ನ ಸಂಭ್ರಮ, ಭಾವನಾತ್ಮಕ ಕ್ಷಣಗಳು ಹಾಗೂ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದ ಸ್ಪರ್ಧಿಗಳ ನೆಮ್ಮದಿಗೆ ಬಿಗ್ ಬಾಸ್ ಒಮ್ಮೆಲೆ ಬೆಂಕಿ ಹಚ್ಚಿದ್ದಾರೆ. ಇವತ್ತು ನಡೆಯಲಿರುವ ಡಬಲ್ ಎಲಿಮಿನೇಷನ್ ಘೋಷಣೆ, ಮನೆಯೊಳಗಿನ ವಾತಾವರಣವನ್ನೇ ಸಂಪೂರ್ಣವಾಗಿ ಬದಲಿಸಿದೆ.
ವೀಕೆಂಡ್ ಸಂಚಿಕೆ ಎಂದರೆ ಕಿಚ್ಚ ಸುದೀಪ್ ಅವರ ಕ್ಲಾಸ್, ಮಜಾ ಮಾತುಗಳು ಮತ್ತು ಸ್ಪರ್ಧಿಗಳಿಗೆ ಸಿಗುವ ಮಾರ್ಗದರ್ಶನ. ಆದರೆ ಈ ಬಾರಿ ವಿಶೇಷವಾಗಿ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ವೀಕೆಂಡ್ ಎಪಿಸೋಡ್ ಪ್ರಸಾರವಾಗಲಿದೆ. ಸಿನಿಮಾ ರಿಲೀಸ್ ಬ್ಯುಸಿಯಲ್ಲಿರುವ ಕಾರಣ, ಈ ವಾರ ಕಿಚ್ಚ ಮನೆಗೆ ಬರಲಿಲ್ಲ. ಇದರಿಂದಲೇ ಈ ವೀಕೆಂಡ್ ಇನ್ನಷ್ಟು ವಿಭಿನ್ನವಾಗಿ ಕಾಣಿಸುತ್ತಿದೆ.
ಎರಡು ದಿನಗಳಲ್ಲಿ ಇಬ್ಬರು ಸ್ಪರ್ಧಿಗಳು ಮನೆ ಬಿಟ್ಟು ಹೊರ ಹೋಗಲಿದ್ದಾರೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಇವತ್ತು ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಲಿದ್ದರೆ, ನಾಳೆ ಮತ್ತೊಬ್ಬ ಸ್ಪರ್ಧಿಯ ಆಟಕ್ಕೆ ತೆರೆ ಬೀಳಲಿದೆ. ಈ ನಿರ್ಧಾರ ಕೇಳುತ್ತಿದ್ದಂತೆಯೇ, ಈಗಾಗಲೇ ನಾಮಿನೇಷನ್‌ನಲ್ಲಿ ಇರುವ ಸ್ಪರ್ಧಿಗಳ ಮುಖದಲ್ಲಿ ಆತಂಕ ಹೆಚ್ಚಿದೆ.
ಫ್ಯಾಮಿಲಿ ರೌಂಡ್‌ನಲ್ಲಿ ಮನೆಯವರ ಭೇಟಿ, ಕಣ್ಣೀರು, ನಗು, ಭಾವನೆಗಳ ನಡುವೆ ಸ್ಪರ್ಧಿಗಳು ಆಟದ ಒತ್ತಡವನ್ನು ಸ್ವಲ್ಪ ಮರೆತಿದ್ದರು. ಆದರೆ ಇದೀಗ ಡಬಲ್ ಎಲಿಮಿನೇಷನ್ ಸುದ್ದಿ ಕೇಳಿ, “ನಾವು ಸೇಫ್ ಆಗ್ತೀವಾ?” ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಮೂಡಿದೆ. ಗೆಲುವಿನ ಕನಸು ಕಂಡಿದ್ದ ಹಲವರ ಪಾಲಿಗೆ ಇದು ನಿಜಕ್ಕೂ ಶಾಕ್ ಆಗಿದೆ.
ವೀಕೆಂಡ್ ಸಂಚಿಕೆಯ ಜೋಶ್ ಹೆಚ್ಚಿಸಲು ಸ್ಟಾರ್‌ಗಳ ದಂಡೇ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದೆ. ನಿರ್ದೇಶಕ ಜೋಗಿ ಪ್ರೇಮ್, ನಟಿ ರೀಷ್ಮಾ ನಾಣಯ್ಯ ಹಾಗೂ ಭಾಗ್ಯಲಕ್ಷ್ಮೀ ಸೀರಿಯಲ್‌ನ ಭಾಗ್ಯ ಮತ್ತು ತಾಂಡವ್ ವಿಶೇಷ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಇವರ ಸಮ್ಮುಖದಲ್ಲೇ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ ಎನ್ನುವುದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.
ಈಗಾಗಲೇ ಜೋಗಿ ಪ್ರೇಮ್ ಅವರ ಡೈಲಾಗ್ ಒಂದು ಭಾರಿ ವೈರಲ್ ಆಗಿದೆ. “ಬಿಗ್ ಬಾಸ್ ಯಾರನ್ನ ಕರ್ಕೊಂಡು ಹೋಗ್ಬೇಕು ಅಂತ ಹೇಳಿ, ನಾನು ಕರೆದುಕೊಂಡು ಹೋಗ್ತೀನಿ” ಎಂಬ ಅವರ ಮಾತು, ಮನೆಯೊಳಗೆ ನಗು ತರಿಸಿದರೂ, ಸ್ಪರ್ಧಿಗಳ ಆತಂಕ ಕಡಿಮೆ ಮಾಡಿಲ್ಲ. ಬಿಗ್ ಬಾಸ್ ತೋರಿಸಿರುವ ಎಲಿಮಿನೇಷನ್‌ನ ಕೊನೆಯ ದೃಶ್ಯ ಯಾರು ಔಟ್ ಆಗಿದ್ದಾರೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.
