ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್

Untitled design 2026 03 08T192908.708

ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ (Dog Satish), ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅವರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಶೌಚಾಲಯದಲ್ಲಿ ಚಿತ್ರೀಕರಿಸಿದ ವಿಡಿಯೋವೊಂದಕ್ಕೆ ಸುದೀಪ್ ಅವರ ಸಿನಿಮಾದ ಹಾಡನ್ನು ಬಳಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದ ಸತೀಶ್, ಈಗ ಸುದೀಪ್ ಅವರ ಜನಪ್ರಿಯತೆಯನ್ನೇ ಪ್ರಶ್ನಿಸಿದ್ದಾರೆ.

ವಿವಾದದ ಕಿಡಿ ಹೊತ್ತಿದ್ದು ಎಲ್ಲಿ ?

ಇತ್ತೀಚೆಗೆ ಡಾಗ್ ಸತೀಶ್ ಶೌಚಾಲಯದಲ್ಲಿ ಕುಳಿತಿರುವ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗೆ ಹಿನ್ನೆಲೆಯಾಗಿ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಅತ್ಯಂತ ಜನಪ್ರಿಯ ‘ದಾದಾ ಯಾರ್ ಗೊತ್ತಾ..’ ಹಾಡನ್ನು ಬಳಸಲಾಗಿತ್ತು. ಒಬ್ಬ ಸ್ಟಾರ್ ನಟನ ಮಾಸ್ ಹಾಡನ್ನು ಇಂತಹ ಜಾಗದಲ್ಲಿ ಬಳಸಿದ್ದು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ರಜತ್ ಈ ಕೃತ್ಯವನ್ನು ಬಹಿರಂಗವಾಗಿಯೇ ಖಂಡಿಸಿದ್ದರು.

ತಮ್ಮ ನಡೆಯನ್ನು ಟೀಕಿಸಿದವರಿಗೆ ಪ್ರತಿಯಾಗಿ ಮಾತನಾಡಿರುವ ಡಾಗ್ ಸತೀಶ್, ಸುದೀಪ್ ಅವರ ಸಾಧನೆಯನ್ನೇ ಲಘುವಾಗಿ ಪರಿಗಣಿಸಿದ್ದಾರೆ. ಗೂಗಲ್‌ನಲ್ಲಿ ಇಂಡಿಯಾ ನಂಬರ್ 1 ಹೀರೋ ಎಂದು ಹುಡುಕಿದರೆ ಸುದೀಪ್ ಹೆಸರು ಬರುತ್ತದೆಯೇ ? ಅವರು ಕೇವಲ ಕರ್ನಾಟಕಕ್ಕೆ ಅಥವಾ ಅರ್ಧ ಭಾರತಕ್ಕೆ ಸ್ಟಾರ್ ಆಗಿರಬಹುದು. ಆದರೆ ನಾನು ನಾಯಿಗಳ ಫೀಲ್ಡ್‌ನಲ್ಲಿ (Dog Field) ಇಡೀ ಪ್ರಪಂಚಕ್ಕೇ ನಂಬರ್ 1 ಎಂದು ಹೇಳಿದ್ದಾರೆ.

ನಟರಾದ ಮಾತ್ರಕ್ಕೆ ಅವರ ತಲೆಯ ಮೇಲೆ ಕೊಂಬಿರುತ್ತದೆಯೇ ? ಎಂದು ಪ್ರಶ್ನಿಸಿರುವ ಅವರು, ಅವರು ಅವರ ಕ್ಷೇತ್ರದಲ್ಲಿ ಕಷ್ಟಪಟ್ಟು ಬೆಳೆದಿದ್ದರೆ, ನಾನು ನನ್ನ ಕ್ಷೇತ್ರದಲ್ಲಿ ಕಷ್ಟಪಟ್ಟು ಬೆಳೆದಿದ್ದೇನೆ. ನಾನು ಬಳಸಿದ ಹಾಡಿನಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ವಿವಾದ ಇಷ್ಟೊಂದು ದೊಡ್ಡದಾಗಲು ರಜತ್ ಮತ್ತು ವಿನಯ್ ಗೌಡ ಅವರೇ ಕಾರಣ ಎಂದು ಸತೀಶ್ ಆರೋಪಿಸಿದ್ದಾರೆ. ಅವರು ನನ್ನ ವಿಡಿಯೋವನ್ನು ಎಲ್ಲೆಡೆ ಶೇರ್ ಮಾಡಿ, ಕೆಟ್ಟದಾಗಿ ಕಮೆಂಟ್ ಹಾಕುವಂತೆ ಪ್ರಚೋದನೆ ನೀಡಿದ್ದಾರೆ. ಅವರು ಸುಮ್ಮನಿದ್ದಿದ್ದರೆ ಇಷ್ಟೊಂದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ ಎಂದು ಕಿಡಿ ಕಾರಿದ್ದಾರೆ.

ಸದ್ಯ ಸುದೀಪ್ ಅಭಿಮಾನಿಗಳು ಡಾಗ್ ಸತೀಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದು, ಕ್ಷಮೆಯಾಚನೆಗೆ ಒತ್ತಾಯಿಸುತ್ತಿದ್ದಾರೆ.

Exit mobile version