ಯೆಜ್ಡಿ ಮತ್ತು ಬಿಎಸ್ಎನಿಂದ 2 ಹೊಸ ಬೈಕ್‌ ಬಿಡುಗಡೆ: ಇವು ದ್ವಿಚಕ್ರ ವಾಹನ ಜಗತ್ತಿನ ‘ಎಸ್‌ಯುವಿ’ಗಳು!

BeFunky collage (50)

ಬೆಂಗಳೂರು: ಸಾಮಾನ್ಯವಾಗಿ ನಗರದಲ್ಲಿ ಓಡಿಸಲು ಒಂದು ಬೈಕ್, ಟ್ರಿಪ್‌ಗೆ ಹೋಗಲು ಮತ್ತೊಂದು ಬೈಕ್ ಬೇಕು ಅಂತ ಹೇಳುವವರಿದ್ದಾರೆ. ಆದರೆ ಇವೆರಡೂ ಕೆಲಸವನ್ನು ಒಂದೇ ಬೈಕ್ ಮಾಡಿದರೆ ಹೇಗಿರುತ್ತೆ? ಇಂಥದ್ದೊಂದು ಮಲ್ಟಿ ಟಾಸ್ಕ್ ಮಾಡುವ ‘ಸ್ಕ್ರ್ಯಾಂಬ್ಲರ್’ ಬೈಕ್‌ಗಳ ವಿಭಾಗದಲ್ಲಿ ಇದೀಗ ಹೊಸ ಕ್ರಾಂತಿ ಶುರುವಾಗಿದೆ. ಯೆಜ್ಡಿ ಮತ್ತು ಬಿಎಸ್ಎ ಸಂಸ್ಥೆಗಳು ಜೊತೆಯಾಗಿ ಎರಡು ಹೊಸ ಬೈಕ್‌ಗಳನ್ನು ಲಾಂಚ್ ಮಾಡಿವೆ.

ಹಗುರ, ಆದರೆ ಪವರ್‌ಫುಲ್ ಬೈಕ್‌ ಈ ಯೆಜ್ಡಿ ಸ್ಕ್ರ್ಯಾಂಬ್ಲರ್ 350

ಯುವಜನತೆಗಾಗಿ ಯೆಜ್ಡಿ ತನ್ನ ಹೊಚ್ಚಹೊಸ ಸ್ಕ್ರ್ಯಾಂಬ್ಲರ್ 350 ಬೈಕ್ ಅನ್ನು ಬಿಡುಗಡೆ ಮಾಡಿದೆ. ಕೇವಲ 174 ಕೆಜಿ ತೂಕವಿರುವ ಇದು, ಈ ವಿಭಾಗದ ಅತ್ಯಂತ ಹಗುರವಾದ ಬೈಕ್! ಇದರಲ್ಲಿ ‘ಕಟಾರ್’ ಹೆಸರಿನ ಹೊಸ ಲಿಕ್ವಿಡ್-ಕೂಲ್ಡ್ ಎಂಜಿನ್ ನೀಡಲಾಗಿದೆ.

’30-30-30′ ಸೂತ್ರ: ಇದು ಭಾರತದ ರಸ್ತೆಗಳಿಗೆ ಪರ್ಫೆಕ್ಟ್ ಆಗಿದ್ದು, ಇದರಲ್ಲಿ 30 ಬಿಎಚ್‌ಪಿ ಪವರ್, 30 ನ್ಯೂಟನ್‌ ಮೀಟರ್‌ ಟಾರ್ಕ್ ಮತ್ತು 30 ಕಿ.ಮೀ/ಲೀ ಮೈಲೇಜ್ ನೀಡುತ್ತದೆ.
ಕೂಲ್ ಎಂಜಿನ್: ಬೈಕ್ ಬಿಸಿಯಾಗದಂತೆ ತಡೆಯಲು ವಿಶೇಷವಾದ ರೇಡಿಯೇಟರ್ ಅಳವಡಿಸಲಾಗಿದೆ. ’69’ ಗ್ರಾಫಿಕ್ಸ್ ಮತ್ತು ಎತ್ತರಿಸಿದ ಮಡ್‌ಗಾರ್ಡ್ ಇದಕ್ಕೆ ರಗಡ್ ಲುಕ್ ನೀಡಿದೆ.
ಬೆಲೆ ಹಾಗೂ ಬಣ್ಣ: ಈ ಬೈಕ್‌ನ ಬೆಲೆ 1,99,950 ರೂ.ನಿಂದ ಶುರುವಾಗುತ್ತದೆ. ಲೆಗಸಿ ಬ್ಲ್ಯಾಕ್, ಒಜಿ ಯೆಲ್ಲೋ, ರೋಗ್ ರೆಡ್ ಮತ್ತು ರ್‍ಯಾಲಿ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ರಾಯಲ್ ಲುಕ್, ಬ್ರಿಟಿಷ್ ತಾಕತ್ತಿನ ಬಿಎಸ್ಎ ಸ್ಕ್ರ್ಯಾಂಬ್ಲರ್ 650

ಇನ್ನು ಹೆಚ್ಚು ಪವರ್ ಬೇಕು ಎನ್ನುವವರಿಗಾಗಿ ‘ಬಿಎಸ್ಎ ಸ್ಕ್ರ್ಯಾಂಬ್ಲರ್ 650’ ಮಾರುಕಟ್ಟೆಗೆ ಬಂದಿದೆ. ವಿಶೇಷವೆಂದರೆ, ಭಾರತದ ಮಾರುಕಟ್ಟೆಯಲ್ಲಿ 650 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಏಕೈಕ ಬೈಕ್ ಇದಾಗಿದೆ. 4,000 ಆರ್‌ಪಿಎಂ, 45 ಬಿಎಚ್‌ಪಿ ಪವರ್ ಮತ್ತು 55 ನ್ಯೂಟನ್‌ ಮೀಟರ್‌ ಟಾರ್ಕ್ ಉತ್ಪಾದಿಸುವ ತಾಕತ್ತು ಇದಕ್ಕಿದೆ.

ವಿನ್ಯಾಸ: ಹಳೆಯ ಕಾಲದ ಫೇಮಸ್ ಬೈಕ್‌ಗಳಾದ ‘ಗೋಲ್ಡ್ ಸ್ಟಾರ್ ಕ್ಯಾಟಲಿನಾ’ ಮತ್ತು ‘ಎ10 ಸ್ಪಿಟ್‌ಫೈರ್’ನಿಂದ ಸ್ಫೂರ್ತಿ ಪಡೆದು ಇದನ್ನು ಡಿಸೈನ್ ಮಾಡಲಾಗಿದೆ. ಕ್ರೋಮ್‌ ಸ್ಪರ್ಶವಿರುವ ಟ್ಯಾಂಕ್ ಹಾಗೂ ’65’ ನಂಬರ್‌ನ ಸೈಡ್ ಪ್ಯಾನೆಲ್‌ಗಳು ಕ್ಲಾಸಿಕ್ ಲುಕ್ ನೀಡಿವೆ.
ಬೆಲೆ ಹಾಗೂ ಬಣ್ಣ: ಆರಂಭಿಕ ಬೆಲೆ 3,24,950 ರೂ. ಆಗಿದ್ದು, ರೇವನ್ ಬ್ಲ್ಯಾಕ್, ವಿಕ್ಟರ್ ಯೆಲ್ಲೋ ಮತ್ತು ಥಂಡರ್ ಗ್ರೇ ಬಣ್ಣಗಳಲ್ಲಿ ಈ ಬೈಕ್‌ ಲಭ್ಯವಿದೆ.

ʼಇವು ಬೈಕ್‌ಗಳ ಜಗತ್ತಿನ ಎಸ್‌ಯುವಿಗಳು!ʼ

ಈ ಬೈಕ್‌ ಲಾಂಚ್ ಇವೆಂಟ್‌ನಲ್ಲಿ ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಕಾರುಗಳ ವಿಭಾಗದಲ್ಲಿ ಎಸ್‌ಯುವಿಗಳು ಹೇಗೆ ಕ್ರಾಂತಿ ಮಾಡಿದವೋ, ಅದೇ ರೀತಿ ಈ ಸ್ಕ್ರ್ಯಾಂಬ್ಲರ್‌ಗಳು ಬೈಕ್ ವಿಭಾಗದಲ್ಲಿ ಕ್ರಾಂತಿ ಮಾಡಲಿವೆ. ಸಿಟಿಯಲ್ಲಿ ಓಡಿಸಲು ಹಾಗೂ ವೀಕೆಂಡ್‌ನಲ್ಲಿ ಗುಡ್ಡಗಾಡು ಸುತ್ತಲು ಇವು ಹೇಳಿ ಮಾಡಿಸಿದಂತಿವೆ,” ಎಂದರು.

ಮತ್ತೊಬ್ಬ ಸಹ-ಸಂಸ್ಥಾಪಕ ಬೋಮನ್ ಇರಾನಿ ಮಾತನಾಡಿ, “ಯೆಜ್ಡಿ ಬ್ರ್ಯಾಂಡ್ ವಿಭಿನ್ನ ಸ್ಟೈಲ್ ಬಯಸುವ ಯುವಕರಿಗೆ ಸೇರಿದ್ದು. ಈಗ ಈ ಹೊಸ ಬೈಕ್‌ಗಳ ಮೂಲಕ ಆ ಥ್ರಿಲ್ ಅನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆ” ಎಂದು ತಿಳಿಸಿದರು.

ಗ್ರಾಹಕರಿಗೆ ಬಂಪರ್ ಆಫರ್ :

ಕೇವಲ ಬೈಕ್ ಮಾರಿ ಕೈತೊಳೆದುಕೊಳ್ಳದೆ, ಗ್ರಾಹಕರಿಗೆ ವಿಶ್ವಾಸ ತುಂಬಲು ‘ಕ್ಲಾಸಿಕ್ ಲೆಜೆಂಡ್ಸ್’ ಭರ್ಜರಿ ಆಫರ್ ನೀಡಿದೆ. ಖರೀದಿದಾರರಿಗೆ 4 ವರ್ಷ ಅಥವಾ 50,000-ಕಿಮೀ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತಿದೆ. ಈ ವಾರಂಟಿಯನ್ನು 6 ವರ್ಷಗಳವರೆಗೆ ವಿಸ್ತರಿಸುವ ಅವಕಾಶ ಇದ್ದು, 8 ವರ್ಷಗಳ ‘ರೋಡ್‌ಸೈಡ್ ಅಸಿಸ್ಟೆನ್ಸ್’ (ದಾರಿ ಮಧ್ಯೆ ಬೈಕ್ ಕೆಟ್ಟರೆ ಸಹಾಯ) ಮತ್ತು 5 ವರ್ಷಗಳ ಎಎಂಸಿ (ಮೈಂಟೆನೆನ್ಸ್ ಕಾಂಟ್ರಾಕ್ಟ್) ಸೌಲಭ್ಯವನ್ನು ನೀಡುತ್ತಿದೆ. ದೇಶಾದ್ಯಂತ ಇರುವ 400ಕ್ಕೂ ಹೆಚ್ಚು ಶೋರೂಮ್‌ಗಳಲ್ಲಿ ಗ್ರಾಹಕರಿಗೆ ಈ ಸೇವೆ ಸಿಗಲಿದೆ.

Exit mobile version