ಭಾರತದಲ್ಲಿ ಫಾರ್ಚೂನರ್‌ನಂತಹ ಜನಪ್ರಿಯ ಎಸ್‌ಯುವಿಗಳಿಗೆ ಹೆಸರಾದ ಟೊಯೋಟಾ, ತನ್ನ ಪ್ರೀಮಿಯಂ ಸೆಡಾನ್ ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಆವೃತ್ತಿಯ ಕಾರು ₹48.50 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಲಭ್ಯವಿದ್ದು, 25.49 ಕಿ.ಮೀ./ಲೀಟರ್ ಮೈಲೇಜ್ ನೀಡುವ ಹೈಬ್ರಿಡ್ ಎಂಜಿನ್‌ನೊಂದಿಗೆ ಬಂದಿದೆ. ನವೆಂಬರ್ 2024 ರಲ್ಲಿ 8ನೇ ತಲೆಮಾರಿನ ಕ್ಯಾಮ್ರಿಯ ಬಿಡುಗಡೆಯ ನಂತರ ಇದು ಟೊಯೋಟಾದ ಮೊದಲ ವಿಶೇಷ ಆವೃತ್ತಿಯಾಗಿದೆ. 2002 ರಿಂದ ಭಾರತದಲ್ಲಿ ಮಾರಾಟವಾಗುತ್ತಿರುವ ಕ್ಯಾಮ್ರಿ, ಐಷಾರಾಮಿ ಸೆಡಾನ್ ವಿಭಾಗದಲ್ಲಿ ತನ್ನ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ.
ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯು ಸಾಮಾನ್ಯ ಕ್ಯಾಮ್ರಿಗಿಂತ ಭಿನ್ನವಾಗಿ ಕಾಣುವಂತೆ ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದಿದೆ. ಇದು ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಒಳಗೊಂಡಿದ್ದು, ಬಾನೆಟ್, ರೂಫ್, ಮತ್ತು ಡಿಕ್ಕಿಯಲ್ಲಿ ಮ್ಯಾಟ್ ಕಪ್ಪು ಫಿನಿಶ್ ಜೊತೆಗೆ ಕೆಂಪು, ಬೂದು, ನೀಲಿ, ಅಥವಾ ಬಿಳಿ ಬಣ್ಣಗಳ ಸಂಯೋಜನೆಯನ್ನು ಹೊಂದಿದೆ. ಮ್ಯಾಟ್ ಕಪ್ಪು ಮಿಶ್ರಲೋಹದ ಚಕ್ರಗಳು, ಮುಂಭಾಗ ಮತ್ತು ಹಿಂಭಾಗದ ಸ್ಪೋರ್ಟ್ಸ್ ಬಾಡಿ ಕಿಟ್, ಹಾಗೂ ಹಿಂಭಾಗದ ಸ್ಪಾಯ್ಲರ್ ಈ ಕಾರಿಗೆ ಸ್ಪೋರ್ಟಿ ಮತ್ತು ಆಕರ್ಷಕ ನೋಟವನ್ನು ನೀಡುತ್ತದೆ.
ಸ್ಪ್ರಿಂಟ್ ಆವೃತ್ತಿಯು ಕ್ಯಾಮ್ರಿಯ ಐಷಾರಾಮಿ ವೈಶಿಷ್ಟ್ಯಗಳ ಜೊತೆಗೆ ಹೊಸ ಸೌಲಭ್ಯಗಳನ್ನು ಒಳಗೊಂಡಿದೆ. 10-ವೇ ಪವರ್ ಡ್ರೈವರ್ ಸೀಟ್, ಮುಂಭಾಗದ ಆಸನಗಳು, ವೈರ್‌ಲೆಸ್ ಚಾರ್ಜಿಂಗ್, ಹೆಡ್-ಅಪ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್,ಆಂಬಿಯೆಂಟ್ ಲೈಟಿಂಗ್ ಮತ್ತು ಡೋರ್ ಅಲರ್ಟ್ ಲೈಟ್ ಹೊಂದಿದೆ.
ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯು ಟೊಯೋಟಾ ಸೇಫ್ಟಿ ಸೆನ್ಸ್ 3.0 ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಬಂದಿದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ಅಲರ್ಟ್, ಲೇನ್ ಟ್ರೇಸಿಂಗ್ ಅಸಿಸ್ಟ್, ಪ್ರಿ-ಕೊಲಿಷನ್ ಸಿಸ್ಟಮ್, ಮತ್ತು ಸ್ವಯಂಚಾಲಿತ ಹೈ ಬೀಮ್ ಸೇರಿವೆ. ಇದರ ಜೊತೆಗೆ 9 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಸಹ ಲಭ್ಯವಿದೆ.
ಟೊಯೋಟಾ ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯು ಐಷಾರಾಮಿ, ಸ್ಪೋರ್ಟಿ ಶೈಲಿ, ಮತ್ತು ಇಂಧನ ದಕ್ಷತೆಯ ಸಮತೋಲನವನ್ನು ಒದಗಿಸುತ್ತದೆ. ಇದು ಪ್ರೀಮಿಯಂ ಸೆಡಾನ್ ಪ್ರಿಯರಿಗೆ ಆಕರ್ಷಕ ಆಯ್ಕೆಯಾಗಿದೆ.