ಜಾವಾ, ಯೆಜ್ಡಿ ಅಥವಾ ಬಿಎಸ್ಎ ಬೈಕ್ಗಳನ್ನು ಓಡಿಸುವುದು ಎಂದರೆ ಅದೊಂದು ಹೆಮ್ಮೆಯ ವಿಷಯ. ಈ ಕ್ಲಾಸಿಕ್ ಬೈಕ್ಗಳೆಂದರೆ ಯುವಕರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಬೈಕ್ ಪ್ರಿಯರನ್ನು ಕಾಡುತ್ತಿದ್ದ ಒಂದೇ ಒಂದು ಚಿಂತೆಯೆಂದರೆ, ಈ ಬೈಕ್ಗಳ ನಿರ್ವಹಣೆ ಮತ್ತು ರಿಪೇರಿ ಸಮಯ ಬಂದಾಗ ಅಸಲಿ ಬಿಡಿಭಾಗಗಳಿಗಾಗಿ ಕೇವಲ ಶೋರೂಮ್ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ. ಈ ಸಮಸ್ಯೆಯನ್ನು ಅರಿತಿರುವ ಕಂಪನಿಯು ಇದೀಗ ಬೈಕ್ ಸವಾರರ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ.
ಶೋರೂಮ್ ಮಾತ್ರವಲ್ಲ, ಹೊರಗೂ ಸಿಗಲಿದೆ ಅಸಲಿ ಬಿಡಿಭಾಗಗಳು
ಬೈಕ್ ಸವಾರರ ಮಾಲೀಕತ್ವದ ಅನುಭವವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಜಾವಾ, ಯೆಜ್ಡಿ ಮತ್ತು ಬಿಎಸ್ಎ ಸಂಸ್ಥೆಗಳು ದೇಶಾದ್ಯಂತ ತಮ್ಮ ಅಧಿಕೃತ ಬಿಡಿಭಾಗಗಳ ವಿತರಣಾ ಜಾಲವನ್ನು ವಿಸ್ತರಿಸುತ್ತಿವೆ. ಇದರ ಅರ್ಥ, ಇನ್ನು ಮುಂದೆ ನಿಮ್ಮ ನೆಚ್ಚಿನ ಬೈಕ್ನ ಒರಿಜಿನಲ್ ಬಿಡಿಭಾಗಗಳು ಕೇವಲ ಕಂಪನಿಯ ಡೀಲರ್ಶಿಪ್ಗಳಲ್ಲಿ ಮಾತ್ರವಲ್ಲದೆ, ಹೊರಗಿನ ಅಧಿಕೃತ ವಿತರಕರು ಮತ್ತು ನಿಮ್ಮ ನೆಚ್ಚಿನ ಸರ್ವೀಸ್ ಸೆಂಟರ್ಗಳಲ್ಲೂ ಸುಲಭವಾಗಿ ಸಿಗಲಿವೆ.
ಬಿಡಿಭಾಗಗಳಿಗಾಗಿ ಗ್ರಾಹಕರು ವಾರಗಟ್ಟಲೆ ಕಾಯುವ ಅಥವಾ ದೂರದ ಶೋರೂಮ್ಗಳಿಗೆ ಅಲೆಯುವ ಅಗತ್ಯವಿರುವುದಿಲ್ಲ. ನಗರ, ಅರೆ-ನಗರ ಮತ್ತು ಹೊಸದಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿರುವ ಗ್ರಾಹಕರಿಗೆ ಇದು ದೊಡ್ಡ ರಿಲೀಫ್ ನೀಡಲಿದೆ.
ಸಮಯದ ಉಳಿತಾಯ ಮತ್ತು ಗುಣಮಟ್ಟದ ಭರವಸೆ
ಒಂದು ಬೈಕ್ ಕೆಟ್ಟು ನಿಂತಾಗ, ಅದರ ಬಿಡಿಭಾಗ ಬೇಗ ಸಿಕ್ಕರೆ ವಾಹನವೂ ಅಷ್ಟೇ ಬೇಗ ರಿಪೇರಿಯಾಗಿ ಕೈಸೇರುತ್ತದೆ. ಬಿಡಿಭಾಗಗಳಿಗಾಗಿ ನಡೆಯುತ್ತಿದ್ದ ಹುಡುಕಾಟವನ್ನು ತಪ್ಪಿಸಿ, ಗ್ರಾಹಕರಿಗೆ ಮತ್ತು ಸ್ಥಳೀಯ ಮೆಕ್ಯಾನಿಕ್ಗಳಿಗೆ ಸುಲಭವಾಗಿ ಪಾರ್ಟ್ಸ್ ಸಿಗುವಂತೆ ಮಾಡುವುದು ಈ ಹೊಸ ಹೆಜ್ಜೆಯ ಮುಖ್ಯ ಉದ್ದೇಶವಾಗಿದೆ.
ಜಾವಾ ಮತ್ತು ಯೆಜ್ಡಿ ಬೈಕ್ಗಳ ‘ನೊಮ್ಯಾಡ್ ಕಮ್ಯುನಿಟಿ’ ಬಳಗ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಗ್ರಾಹಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕಂಪನಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಒರಿಜಿನಲ್ ಪಾರ್ಟ್ಸ್ ಸಿಗುವುದರ ಜೊತೆಗೆ, ಬೈಕ್ನ ಬಾಳಿಕೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆಯೂ ಯಾವುದೇ ಆತಂಕ ಇರುವುದಿಲ್ಲ.
ಈ ಹೊಸ ಉಪಕ್ರಮದ ಬಗ್ಗೆ ಮಾತನಾಡಿರುವ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಹೆಚ್ಚು ಹೆಚ್ಚು ಜನರು ಜಾವಾ, ಯೆಜ್ಡಿ ಮತ್ತು ಬಿಎಸ್ಎ ಬೈಕ್ಗಳನ್ನು ಖರೀದಿಸುತ್ತಿದ್ದು, ಅವರಿಗೆ ತೊಂದರೆಯಿಲ್ಲದ ಅತ್ಯುತ್ತಮ ಸೇವೆ ನೀಡುವುದು ತಮ್ಮ ಮೊದಲ ಆದ್ಯತೆಯಾಗಿದೆ,” ಎಂದು ತಿಳಿಸಿದ್ದಾರೆ.
“ಬೈಕ್ ಸವಾರರಿಗೆ ಅಸಲಿ ಬಿಡಿಭಾಗಗಳು ಸುಲಭವಾಗಿ ಸಿಗುವಂತೆ ಮಾಡುವುದು ಬಹಳ ಮುಖ್ಯ. ಗ್ರಾಹಕರ ಪ್ರತಿಕ್ರಿಯೆಗಳನ್ನು ಆಲಿಸಿ, ಅವರ ಬೈಕ್ ನಿರ್ವಹಣೆಯನ್ನು ಸುಲಭಗೊಳಿಸಲು ನಾವು ಈ ವಿತರಣಾ ಜಾಲವನ್ನು ವಿಸ್ತರಿಸುತ್ತಿದ್ದೇವೆ. ಇದು ಗ್ರಾಹಕರಲ್ಲಿ ಮತ್ತಷ್ಟು ವಿಶ್ವಾಸ ಮತ್ತು ನೆಮ್ಮದಿಯನ್ನು ಮೂಡಿಸಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
