ಬೆಂಗಳೂರು: ಕರ್ನಾಟಕದ ಲಕ್ಷಾಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಇಂದು (ಏಪ್ರಿಲ್ 7) ಫಲಿತಾಂಶ ಹೊರಬೀಳಲಿದೆ ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಕೊನೆ ಕ್ಷಣದಲ್ಲಿ ಫಲಿತಾಂಶ ಪ್ರಕಟಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.
ಫಲಿತಾಂಶ ಮುಂದೂಡಿಕೆಗೆ ಅಸಲಿ ಕಾರಣವೇನು?
ಈ ಬಾರಿ ಶಿಕ್ಷಣ ಇಲಾಖೆಯು ಪರೀಕ್ಷೆ ಮುಗಿಯುವ ಮೊದಲೇ ಫಲಿತಾಂಶದ ಸಂಭಾವ್ಯ ದಿನಾಂಕವನ್ನು ಘೋಷಿಸಿ ದಾಖಲೆ ಬರೆದಿತ್ತು. ಸಚಿವ ಮಧು ಬಂಗಾರಪ್ಪ ಅವರು ಏಪ್ರಿಲ್ ಮೊದಲ ವಾರದಲ್ಲಿ ಫಲಿತಾಂಶ ನೀಡುವ ಭರವಸೆ ನೀಡಿದ್ದರು. ಆದರೆ, ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಫಲಿತಾಂಶದ ಮೇಲೆ ಪ್ರಭಾವ ಬೀರಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ಕಾರ್ಯಕ್ರಮಗಳು ಅಥವಾ ಪ್ರಮುಖ ಪ್ರಕಟಣೆಗಳಿಗೆ ಚುನಾವಣಾ ಆಯೋಗದ ಅನುಮತಿ ಅಗತ್ಯವಿರುತ್ತದೆ. ಫಲಿತಾಂಶ ಪ್ರಕಟಿಸಲು ಆಯೋಗಕ್ಕೆ ಪತ್ರ ಬರೆಯಲಾಗಿದ್ದರೂ, ಸಚಿವರ ಲಭ್ಯತೆಯ ಕೊರತೆಯಿಂದಾಗಿ ಇಂದು ಫಲಿತಾಂಶ ಪ್ರಕಟವಾಗುವುದಿಲ್ಲ.
ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗವು ಯಾವುದೇ ತೀವ್ರ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಉಪಚುನಾವಣೆಯ ಪ್ರಚಾರ ಕಾರ್ಯಗಳಲ್ಲಿ ಸಚಿವರು ನಿರತರಾಗಿರುವುದರಿಂದ ಮತ್ತು ನೀತಿ ಸಂಹಿತೆಯ ಅಡಿಯಲ್ಲಿ ಸಚಿವರು ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡುವಲ್ಲಿ ತಾಂತ್ರಿಕ ತೊಂದರೆಗಳು ಎದುರಾಗಿವೆ. ಶಿಕ್ಷಣ ಸಚಿವರು ಲಭ್ಯವಿಲ್ಲದ ಕಾರಣ ಫಲಿತಾಂಶದ ದಿನಾಂಕವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ದಿನಾಂಕ ಯಾವಾಗ?
ವಿದ್ಯಾರ್ಥಿಗಳು ಗಾಬರಿಪಡುವ ಅಗತ್ಯವಿಲ್ಲ. ಚುನಾವಣಾ ಆಯೋಗದಿಂದ ಅಧಿಕೃತ ಪ್ರತಿಕ್ರಿಯೆ ಸಿಕ್ಕ ಬಳಿಕ, ಬಹುಶಃ ಏಪ್ರಿಲ್ 8 ಅಥವಾ 9ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಈ ಕುರಿತು ಮಂಗಳವಾರ ಸಂಜೆಯೊಳಗೆ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ.
ಫಲಿತಾಂಶ ನೋಡುವುದು ಹೇಗೆ?
ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ತಮ್ಮ ರಿಜಿಸ್ಟರ್ ನಂಬರ್ ಬಳಸಿ ಅಂಕಪಟ್ಟಿ ಚೆಕ್ ಮಾಡಬಹುದು:
-
karresults.nic.in
-
kseab.karnataka.gov.in
ವಿದ್ಯಾರ್ಥಿಗಳಿಗೆ ಸಲಹೆ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ಇರಲಿ. ಮಂಡಳಿಯ ಅಧಿಕೃತ ವೆಬ್‌ಸೈಟ್ ಅಥವಾ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳನ್ನು ಮಾತ್ರ ಗಮನಿಸಿ.





