ಫ್ಲೋರಿಡಾ: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಸುಮಾರು 5 ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಮಾನವನನ್ನು ಮತ್ತೆ ಚಂದ್ರನ ಕಕ್ಷೆಗೆ ಕೊಂಡೊಯ್ಯುವ ನಾಸಾದ ಮಹತ್ವಾಕಾಂಕ್ಷೆಯ ಆರ್ಟೆಮಿಸ್-II (Artemis II) ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ (ಭಾರತೀಯ ಕಾಲಮಾನ ಗುರುವಾರ ಮುಂಜಾನೆ) ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಒರಾಯನ್ ನೌಕೆಯನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸಿದೆ.
ರಾಕೆಟ್ ಉಡಾವಣೆಯಾದ ಕೇವಲ 8.5 ನಿಮಿಷಗಳಲ್ಲಿ ಅದರ ಬೃಹತ್ ಕೋರ್ ಸ್ಟೇಜ್ ಯಶಸ್ವಿಯಾಗಿ ಬೇರ್ಪಟ್ಟಿತು. ಈ ಹಂತದಲ್ಲಿ ಒರಾಯನ್ (Orion) ನೌಕೆಯು ತನ್ನ ಸೌರಫಲಕಗಳನ್ನು (Solar Arrays) ತೆರೆದುಕೊಂಡು ಭೂಮಿಯ ಕೆಳ ಕಕ್ಷೆಯನ್ನು ತಲುಪಿತು. ಉಡಾವಣೆಯಾದ 90 ನಿಮಿಷಗಳ ನಂತರ, ನೌಕೆಯು ಭೂಮಿಯಿಂದ 74 ಸಾವಿರ ಕಿಲೋಮೀಟರ್ ಎತ್ತರದ ಎರಡನೇ ಕಕ್ಷೆಗೆ ಜಿಗಿಯಿತು. ಇಲ್ಲಿ ಗಗನಯಾತ್ರಿಗಳು 24 ಗಂಟೆಗಳ ಕಾಲ ನೌಕೆಯ ಎಲ್ಲಾ ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರೀಕ್ಷಿಸಲಿದ್ದಾರೆ. ಈ ಪರೀಕ್ಷೆಗಳು ಯಶಸ್ವಿಯಾದ ನಂತರ, ನೌಕೆಯು ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ಚಂದ್ರನತ್ತ ತನ್ನ 10 ದಿನಗಳ ಸುದೀರ್ಘ ಪಯಣ ಆರಂಭಿಸಲಿದೆ.
The hatch is now closed.
The Artemis II astronauts are now strapped into their seats and ready for launch. pic.twitter.com/NWSjgklep9
— NASA (@NASA) April 1, 2026
ಐತಿಹಾಸಿಕ ನಾಲ್ವರು ಗಗನಯಾತ್ರಿಗಳು
ಈ ಮಿಷನ್ ಕೇವಲ ತಾಂತ್ರಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಮಹತ್ವದ್ದಾಗಿದೆ. ಈ ತಂಡದಲ್ಲಿರುವ ನಾಲ್ವರು ಸಾಧಕರು ಇತಿಹಾಸ ಸೃಷ್ಟಿಸಿದ್ದಾರೆ:
-
ರೀಡ್ ವೈಸ್‌ಮನ್: ಮಿಷನ್ ಕಮಾಂಡರ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
-
ವಿಕ್ಟರ್ ಗ್ಲೋವರ್: ಚಂದ್ರನತ್ತ ಪ್ರಯಾಣಿಸುತ್ತಿರುವ ಮೊದಲ ಕಪ್ಪು ವರ್ಣೀಯ ಗಗನಯಾತ್ರಿ.
-
ಕ್ರಿಸ್ಟಿನಾ ಕೋಚ್: ಚಂದ್ರನ ಕಕ್ಷೆಗೆ ತಲುಪಲಿರುವ ವಿಶ್ವದ ಮೊದಲ ಮಹಿಳೆ.
-
ಜೆರೆಮಿ ಹ್ಯಾನ್ಸನ್: ಕೆನಡಾ ಬಾಹ್ಯಾಕಾಶ ಸಂಸ್ಥೆಯ ಪ್ರತಿನಿಧಿಯಾಗಿ ಈ ಐತಿಹಾಸಿಕ ಪಯಣದ ಭಾಗವಾಗಿದ್ದಾರೆ.
The hatch is now closed.
The Artemis II astronauts are now strapped into their seats and ready for launch. pic.twitter.com/NWSjgklep9
— NASA (@NASA) April 1, 2026
ಮಿಷನ್‌ನ ವಿಶೇಷತೆ ಮತ್ತು ಉದ್ದೇಶ
1972ರ ಅಪೊಲೊ 17 ಮಿಷನ್ ನಂತರ ಮಾನವನು ಚಂದ್ರನ ಸಮೀಪಕ್ಕೆ ಹೋಗುತ್ತಿರುವುದು ಇದೇ ಮೊದಲು. ಈ ಬಾರಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುವುದಿಲ್ಲ. ಬದಲಾಗಿ, ಚಂದ್ರನ ಮೇಲ್ಮೈಯಿಂದ ಸುಮಾರು 6,400 ರಿಂದ 9,600 ಕಿಲೋಮೀಟರ್ ದೂರದಲ್ಲಿ, ಚಂದ್ರನ ಹಿಂಬದಿಯ (Far side) ಮೂಲಕ ಹಾದು ಹೋಗಲಿದ್ದಾರೆ. ಈ 10 ದಿನಗಳ ಅವಧಿಯಲ್ಲಿ ಅವರು ಒಟ್ಟು 11 ಲಕ್ಷ ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ದೂರ ಕ್ರಮಿಸಲಿದ್ದಾರೆ. ಇದು 1970ರಲ್ಲಿ ಅಪೊಲೊ 13 ನಿರ್ಮಿಸಿದ್ದ ದಾಖಲೆಯನ್ನು ಮೀರಿಸುವ ನಿರೀಕ್ಷೆಯಿದೆ.
ಈ ಮಿಷನ್‌ನ ಮುಖ್ಯ ಉದ್ದೇಶವೆಂದರೆ ಒರಾಯನ್ ನೌಕೆಯು ಬಾಹ್ಯಾಕಾಶದ ವಿಕಿರಣಗಳನ್ನು ಹೇಗೆ ತಡೆದುಕೊಳ್ಳುತ್ತದೆ ಮತ್ತು ಗಗನಯಾತ್ರಿಗಳ ಜೀವ ರಕ್ಷಣಾ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಇದು ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ಆರ್ಟೆಮಿಸ್-III ಯೋಜನೆಗೆ ಬುನಾದಿಯಾಗಲಿದೆ.
ನಾಸಾದ ಈ ಯೋಜನೆಯು ಕೇವಲ ಚಂದ್ರನಿಗೆ ಸೀಮಿತವಾಗಿಲ್ಲ. ಚಂದ್ರನ ಮೇಲೆ ಸಂಶೋಧನೆ ನಡೆಸಿ, ಅಲ್ಲಿನ ಸಂಪನ್ಮೂಲಗಳನ್ನು ಬಳಸಿ ಮುಂದಿನ ದಿನಗಳಲ್ಲಿ ಮಾನವನನ್ನು ಮಂಗಳ ಗ್ರಹಕ್ಕೆ (Mars) ಕಳುಹಿಸುವ ಬೃಹತ್ ಯೋಜನೆಯ ಮೊದಲ ಹೆಜ್ಜೆ ಇದಾಗಿದೆ. 50 ವರ್ಷಗಳ ನಂತರ ಮರಳುತ್ತಿರುವ ಈ ‘ಮೂನ್ ಮಿಷನ್’ ಇಡೀ ಜಗತ್ತಿನ ಕುತೂಹಲವನ್ನು ಕೆರಳಿಸಿದೆ.





