ಬೆಳಗಾವಿ: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹಿರಿಯ ಉದ್ಯಮಿಯೊಬ್ಬರನ್ನು ಮನಿ ಲಾಂಡ್ರಿಂಗ್ (ಅಕ್ರಮ ಹಣ ವರ್ಗಾವಣೆ) ಪ್ರಕರಣದ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು, ಅವರಿಂದ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಇದು ಜಿಲ್ಲೆಯ ಇತಿಹಾಸದಲ್ಲೇ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣಗಳಲ್ಲಿ ಒಂದಾಗಿದೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ವಂಚಕರು ಉದ್ಯಮಿಗೆ ಕರೆ ಮಾಡಿ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ನಿಮ್ಮ ಬ್ಯಾಂಕ್ ಖಾತೆಯು ಮನಿ ಲಾಂಡ್ರಿಂಗ್ ಪ್ರಕರಣವೊಂದರಲ್ಲಿ ಭಾಗಿಯಾಗಿದೆ. ಈ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಹೇಳಿ ಉದ್ಯಮಿಗೆ ಭಯ ಹುಟ್ಟಿಸಿದ್ದಾರೆ.
ತನಿಖಾ ಸಂಸ್ಥೆಗಳ ಹೆಸರನ್ನು ಬಳಸಿ ಬೆದರಿಸಿದ ವಂಚಕರು, ನಿಮ್ಮ ಹಣವನ್ನು ಉಳಿಸಿಕೊಳ್ಳಬೇಕಾದರೆ ಸದ್ಯಕ್ಕೆ ಅದನ್ನು ನಾವು ಸೂಚಿಸುವ ಸುರಕ್ಷಿತ ಖಾತೆಗಳಿಗೆ ವರ್ಗಾಯಿಸಬೇಕು. ತನಿಖೆ ಮುಗಿದ ಬಳಿಕ ಈ ಹಣವನ್ನು ನಿಮಗೆ ಮರಳಿ ನೀಡಲಾಗುವುದು ಎಂದು ನಂಬಿಸಿದ್ದಾರೆ. ಕಾನೂನು ಪ್ರಕ್ರಿಯೆಗಳ ಬಗ್ಗೆ ಸರಿಯಾದ ಅರಿವಿಲ್ಲದ ಮತ್ತು ವಂಚಕರ ಬೆದರಿಕೆಗೆ ಹೆದರಿದ ಉದ್ಯಮಿ, ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 15 ಕೋಟಿ ರೂ. ಹಣವನ್ನು ವರ್ಗಾಯಿಸಿದ್ದಾರೆ.
ಒಮ್ಮೆ ದೊಡ್ಡ ಮೊತ್ತದ ಹಣ ವರ್ಗಾವಣೆಯಾದ ನಂತರ, ವಂಚಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಎಲ್ಲ ರೀತಿಯ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಉದ್ಯಮಿ ತಕ್ಷಣವೇ ಬೆಳಗಾವಿಯ ಸೈಬರ್ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಬೆಳಗಾವಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಂಚಕರು ಬಳಸಿದ ವಿವಿಧ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿದ ಪೊಲೀಸರು, ಒಂದು ಖಾತೆಯಲ್ಲಿದ್ದ 90 ಲಕ್ಷ ರೂಪಾಯಿಗಳನ್ನು ತಕ್ಷಣವೇ ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ವಂಚಕರು ಆ ಮೊತ್ತವನ್ನು ವಿತ್‌ಡ್ರಾ ಮಾಡದಂತೆ ತಡೆಯಲಾಗಿದೆ. ಬೆಳಗಾವಿ ಪೊಲೀಸ್ ಕಮಿಷನರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ (SIT) ವನ್ನು ರಚಿಸಿದ್ದಾರೆ.
ಹಿರಿಯ ನಾಗರಿಕರೇ ಟಾರ್ಗೆಟ್ ?
ಕಳೆದ ಒಂದು ತಿಂಗಳ ಅವಧಿಯಲ್ಲಿ ಬೆಳಗಾವಿಯಲ್ಲೇ ಸುಮಾರು ಮೂವರು ಹಿರಿಯ ನಾಗರಿಕರು ಇಂತಹ ಸೈಬರ್ ವಂಚನೆಗೆ ಬಲಿಯಾಗಿರುವುದು ಆತಂಕ ಮೂಡಿಸಿದೆ. ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ಅರಿವು ಕಡಿಮೆ ಇರುವುದನ್ನು ಮತ್ತು ಅವರು ಕಾನೂನು ಪ್ರಕ್ರಿಯೆಗಳಿಗೆ ಹೆದರುವುದನ್ನು ವಂಚಕರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ.
ಪೊಲೀಸರ ಕಿವಿಮಾತು
-
ಯಾವುದೇ ಪೊಲೀಸ್ ಅಥವಾ ಬ್ಯಾಂಕ್ ಅಧಿಕಾರಿಗಳು ಫೋನ್ ಮೂಲಕ ಹಣ ವರ್ಗಾಯಿಸಲು ಕೇಳುವುದಿಲ್ಲ.
-
‘ಡಿಜಿಟಲ್ ಅರೆಸ್ಟ್’ ಅಥವಾ ‘ಮನಿ ಲಾಂಡ್ರಿಂಗ್’ ಹೆಸರಿನಲ್ಲಿ ಬರುವ ಬೆದರಿಕೆ ಕರೆಗಳಿಗೆ ಕಿವಿಗೊಡಬೇಡಿ.
-
ಇಂತಹ ಕರೆಗಳು ಬಂದಾಗ ತಕ್ಷಣವೇ 1930 ಸೈಬರ್ ಕ್ರೈಂ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
-
ಅಪರಿಚಿತರು ನೀಡುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ನಿಮ್ಮ ಖಾಸಗಿ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಬೇಡಿ.





