ಮಧ್ಯಪ್ರಾಚ್ಯದ ನೆಲದಲ್ಲಿ ಭೀಕರ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ. ಇಸ್ರೇಲ್ ಸೇರಿದಂತೆ ಒಟ್ಟು ಒಂಬತ್ತು ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಆರಂಭಿಸಿದೆ. ಈ ದಾಳಿಯು ಕೇವಲ ಇಸ್ರೇಲ್‌ಗೆ ಸೀಮಿತವಾಗದೆ, ಅಕ್ಕಪಕ್ಕದ ಹಲವು ರಾಷ್ಟ್ರಗಳ ವಾಯುಗಡಿಗೂ ತಟ್ಟಿದೆ.
ಕಾಮಿಕಾಜಿ ಡ್ರೋನ್‌ಗಳ ಆರ್ಭಟ
ಇರಾನ್ ಈ ಬಾರಿ ಅತ್ಯಂತ ಅಪಾಯಕಾರಿ ಎನ್ನಲಾದ ‘ಕಾಮಿಕಾಜಿ’ (Kamikaze) ಆತ್ಮಾಹುತಿ ಡ್ರೋನ್‌ಗಳನ್ನು ಬಳಸುತ್ತಿದೆ. ಈ ಡ್ರೋನ್‌ಗಳು ಗುರಿಯನ್ನು ತಲುಪಿದ ತಕ್ಷಣ ಸ್ಫೋಟಗೊಳ್ಳುವ ಸಾಮರ್ಥ್ಯ ಹೊಂದಿವೆ. ನೂರಾರು ಸಂಖ್ಯೆಯಲ್ಲಿ ಏಕಕಾಲಕ್ಕೆ ಉಡಾವಣೆ ಮಾಡಲಾದ ಈ ಡ್ರೋನ್‌ಗಳು ಆಯಾ ದೇಶಗಳ ವಾಯುಪಡೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಇದುವರೆಗೆ ಇರಾನ್ ನೂರಾರು ಡ್ರೋನ್‌ಗಳನ್ನು ವಿವಿಧ ದಿಕ್ಕುಗಳಿಂದ ಉಡಾಯಿಸಿದೆ ಎಂದು ವರದಿಯಾಗಿದೆ.
ಅರಬ್ ರಾಷ್ಟ್ರಗಳ ತಿರುಗೇಟು
ಇರಾನ್‌ನ ಈ ಉದ್ಧಟತನಕ್ಕೆ ಅರಬ್ ರಾಷ್ಟ್ರಗಳು ತಕ್ಕ ಪ್ರತ್ಯುತ್ತರ ನೀಡುತ್ತಿವೆ. ಈ ದಾಳಿಯನ್ನು ತಡೆಯಲು ಕುವೈತ್, ಯುಎಇ ಮತ್ತು ಕತಾರ್ ದೇಶಗಳು ತಮ್ಮ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು (Air Defense System) ಸಕ್ರಿಯಗೊಳಿಸಿವೆ. ಇರಾನ್ ಉಡಾಯಿಸಿದ್ದ ಸುಮಾರು 380ಕ್ಕೂ ಹೆಚ್ಚು ಡ್ರೋನ್‌ಗಳನ್ನು ಕುವೈತ್ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ತಿಳಿಸಿದೆ. ಯುಎಇ ಸಹ ತನ್ನ ವಾಯುಗಡಿಗೆ ನುಗ್ಗಿದ್ದ ಇರಾನ್ ಡ್ರೋನ್‌ಗಳನ್ನು ಉಡೀಸ್ ಮಾಡಿದೆ. ಇನ್ನು ಕತಾರ್ ವಾಯುಪಡೆಯು ಇರಾನ್‌ನ 17 ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಇಸ್ರೇಲ್ ತನ್ನ ಐರನ್ ಡೋಮ್ (Iron Dome) ತಂತ್ರಜ್ಞಾನದ ಮೂಲಕ ದಾಳಿಯನ್ನು ಎದುರಿಸುತ್ತಿದ್ದರೂ, 9 ದೇಶಗಳ ಮೇಲೆ ಒಟ್ಟಾಗಿ ದಾಳಿ ಮಾಡುವ ಮೂಲಕ ಇರಾನ್ ಈ ಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದೆ. ಇರಾನ್‌ನ ಈ ನಡೆಯು ಸೌದಿ ಅರೇಬಿಯಾದಂತಹ ಇತರ ರಾಷ್ಟ್ರಗಳ ಮೇಲೆಯೂ ಪರಿಣಾಮ ಬೀರುತ್ತಿದ್ದು, ಯುದ್ಧವು ಮತ್ತಷ್ಟು ವಿಸ್ತರಿಸುವ ಆತಂಕ ಎದುರಾಗಿದೆ.
ಜಾಗತಿಕ ಪರಿಣಾಮ
ಈ ದಾಳಿಯಿಂದಾಗಿ ತೈಲ ಮಾರುಕಟ್ಟೆಯಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಈಗಾಗಲೇ ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಆದರೆ ಇರಾನ್ ಮಾತ್ರ ತನ್ನ ಆತ್ಮಾಹುತಿ ನೀತಿಯಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಮುಂದಿನ ಕೆಲವು ಗಂಟೆಗಳು ಈ ಭಾಗದ ಭವಿಷ್ಯವನ್ನು ನಿರ್ಧರಿಸಲಿವೆ.





