ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದ ಒಂದು ಮದುವೆ ಕಾರ್ಯಕ್ರಮ ಅನಿರೀಕ್ಷಿತ ತಿರುವು ಪಡೆದು ಅರ್ಧಕ್ಕೆ ನಿಂತಿದೆ. 41 ವರ್ಷದ ದೀಕ್ಷಿತ್ ಹೆಗ್ಡೆ ಮತ್ತು 29 ವರ್ಷದ ಸುಷ್ಮಾ ಅವರ ವಿವಾಹವು ಈಡಿಗ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಬಂದ ಅನಾಮಧೇಯ ಪತ್ರವೊಂದು ಎಲ್ಲವನ್ನೂ ಬದಲಾಯಿಸಿದೆ. ಈ ಪತ್ರದಲ್ಲಿ ವರನ ಬಗ್ಗೆ ಆಘಾತಕಾರಿ ಮಾಹಿತಿಗಳು ಬಯಲಾಗುತ್ತಿದ್ದಂತೆ, ವಧು ಈ ಮದುವೆ ನನಗೆ ಬೇಡ ಎಂದು ಮಂಟಪದಿಂದ ಹೊರನಡೆದಿರುವ ಘಟನೆ ನಡೆದಿದೆ.
ಘಟನೆಯ ಹಿನ್ನೆಲೆ
ಸುಷ್ಮಾ ಅವರಿಗೆ ಇದು ಎರಡನೇ ಮದುವೆಯಾಗಿತ್ತು. ಅವರಿಗೆ 9 ವರ್ಷದ ಮಗನೊಬ್ಬನಿದ್ದು, ಮಗನಿಗೆ ತಂದೆಯ ಸ್ಥಾನ ನೀಡುವ ಮತ್ತು ತನಗೆ ಆಸರೆಯಾಗುವ ವ್ಯಕ್ತಿಯನ್ನು ಹುಡುಕಿ ದೀಕ್ಷಿತ್ ಅವರನ್ನು ಮದುವೆಯಾಗಲು ಮುಂದಾಗಿದ್ದರು. ದೀಕ್ಷಿತ್ ಅವರಿಗೆ ಇದು ಮೊದಲ ಮದುವೆಯಾಗಿತ್ತು. ಮದುವೆ ಸಂಭ್ರಮದ ನಡುವೆ ಅಪರಿಚಿತರಿಂದ ಬಂದ 5 ಪುಟಗಳ ದೂರು ಪತ್ರವು ಸುಷ್ಮಾ ಅವರ ಕೈಸೇರಿತು.ಈ ಬಗ್ಗೆ ವಧು, ದೀಕ್ಷಿತ್ ಕುಟುಂಸ್ಥರಲ್ಲಿ ಕೇಳಿದಾಗ ಅವರುಮದುವೆಯಾಗಲಿ ಆಮೇಲೆ ಹೇಳಿತ್ತೇವೆ ಎಂದು ಮುಂದೂಡಿದ್ದಾರೆ.ಇದರಿಂದ ಅನುಮಾನಗೊಂಡ ವಧಯ ಮದುವೆಯನ್ನ ನಿಲ್ಲಿಸಿದ್ದಾರೆ.
ಈ ಬಗ್ಗೆ ವಧು ತಿಳಿಸಿದಂತೆ, ದೀಕ್ಷಿತ್ ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದರು. ಅಲ್ಲದೆ, ಅವರ ಮೇಲೆ ಹಲವು ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು. ಮುಖ್ಯವಾಗಿ, 2021ರಲ್ಲಿ ನಡೆದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೀಕ್ಷಿತ್ ಆರೋಪಿಯಾಗಿದ್ದರು. ಈ ಆರೋಪ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಜೊತೆಗೆ, ಮನೆಯಲ್ಲಿ ದೀಕ್ಷಿತ್ ಅವರ ತಾಯಿಯ ಆರೋಗ್ಯ ಸರಿಯಿಲ್ಲ ಎಂಬ ಸತ್ಯವನ್ನು ಮದುವೆಗೂ ಮುನ್ನ ಬಹಿರಂಗಪಡಿಸಿರಲಿಲ್ಲ. ಸುಷ್ಮಾ ಅವರು ಈ ಬಗ್ಗೆ ಹಲವು ಬಾರಿ ಕೇಳಿದರೂ, ಮದುವೆಯ ನಂತರ ಹೇಳುತ್ತೇನೆ ಎಂದಿದ್ದಾರೆ. ಹೀಗಾಗಿ ವಧು ಆಕ್ರೋಶಗೊಂಡು ಮದುವೆ ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ.
ಮದುವೆ ಮಂಟಪದಲ್ಲಿ ಈ ಹೈಡ್ರಾಮಾ ಶುರುವಾಗುತ್ತಿದ್ದಂತೆ ಸ್ಥಳಕ್ಕೆ ಸಿಡಿಪಿಓ ಅಧಿಕಾರಿಗಳು ಮತ್ತು ಶೃಂಗೇರಿ ಪೊಲೀಸರು ಆಗಮಿಸಿದರು. ಅವರು ಸುಷ್ಮಾ ಅವರಿಗೆ ಸಂಧಾನ ಮಾಡಿ ಮದುವೆ ಮುಂದುವರಿಸುವಂತೆ ಪ್ರಯತ್ನಿಸಿದರು. ಆದರೆ, ಸುಷ್ಮಾ ನಂಬಿಕೆ ದ್ರೋಹ ಮಾಡಿದವನ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿ ಮಂಟಪದಿಂದ ಹೊರನಡೆದರು. ಈ ಘಟನೆಯಿಂದ ಮದುವೆ ಕಾರ್ಯಕ್ರಮ ಅರ್ಧಕ್ಕೆ ನಿಂತು, ದಿಬ್ಬಣ ವಾಪಸ್ ಹೋಯಿತು. ಸದ್ಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





