ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿರುವ ‘ನಮ್ಮ ಮೆಟ್ರೋ’ದಲ್ಲಿ ಬ್ಯಾಂಕ್ ಸರ್ವರ್ ಸಮಸ್ಯೆಯಿಂದಾಗಿ ಪ್ರಯಾಣಿಕರು ಟಿಕೆಟ್ ಪಡೆಯಲು ಹರಸಾಹಸ ಪಟ್ಟಿದ್ದಾರೆ.
ಇಂದು ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಅನಿರೀಕ್ಷಿತವಾಗಿ ಬ್ಯಾಂಕ್ ಸರ್ವರ್ ಡೌನ್ ಆಗಿದೆ. ಇದರ ನೇರ ಪರಿಣಾಮ ಮೆಟ್ರೋ ನಿಲ್ದಾಣಗಳ ಮೇಲೆ ಬೀರಿದೆ. ಡಿಜಿಟಲ್ ಪಾವತಿ (UPI/Card Payment) ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದರಿಂದ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುತ್ತಿದ್ದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾದರು. ಸಂಜೆ ಕಚೇರಿಯಿಂದ ಮನೆಗೆ ಮರಳುವ ಅವಸರದಲ್ಲಿದ್ದ ಜನರಿಗೆ ಟಿಕೆಟ್ ಕೌಂಟರ್ಗಳ ಮುಂದೆ ದೀರ್ಘಕಾಲ ಕಾಯುವುದು ಅನಿವಾರ್ಯವಾಯಿತು. ನಗದು ಹಣ ಇಲ್ಲದ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದರ ಏರಿಕೆ ಕೈಬಿಟ್ಟ BMRCL:
ಮೆಟ್ರೋ ಪ್ರಯಾಣಿಕರಿಗೆ ಅತ್ಯಂತ ಸಂತಸದ ಸುದ್ದಿ ಎಂದರೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕೈಗೆತ್ತಿಕೊಂಡಿದ್ದ ದರ ಏರಿಕೆ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ಶೇ. 5ರಷ್ಟು ದರ ಹೆಚ್ಚಳ ಮಾಡಲು ಬಿಎಂಆರ್ಸಿಎಲ್ ನಿರ್ಧರಿಸಿತ್ತು. ಆದರೆ, ಸದ್ಯಕ್ಕೆ ಮೆಟ್ರೋ ದರ ಏರಿಕೆ ಮಾಡಬೇಡಿ ಎಂದು ಕೇಂದ್ರ ಸರ್ಕಾರದಿಂದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಅವರಿಗೆ ಅಧಿಕೃತ ಇ-ಮೇಲ್ ಬಂದಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 9 ರಿಂದ ಅನ್ವಯವಾಗುವಂತೆ ಹಳೆಯ ದರದಲ್ಲೇ ಪ್ರಯಾಣ ಮುಂದುವರಿಯಲಿದೆ.
ಮೆಟ್ರೋ ದರ ಏರಿಕೆ ವಿಚಾರವಾಗಿ ರಾಜ್ಯ ಮತ್ತು ಕೇಂದ್ರದ ನಡುವೆ ದೊಡ್ಡ ಮಟ್ಟದ ರಾಜಕೀಯ ಸಮರವೇ ನಡೆದಿತ್ತು. ದರ ಏರಿಕೆಯನ್ನು ನಾವು ಮಾಡಿಲ್ಲ, ಕೇಂದ್ರದವರೇ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮೆಟ್ರೋಗೆ ರಾಜ್ಯ ಸರ್ಕಾರವೇ ಹೆಚ್ಚು ಹಣ ನೀಡುತ್ತಿದೆ, ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದ್ದರು. ಇದೀಗ ಕೇಂದ್ರದ ಸೂಚನೆಯಿಂದ ಈ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.
ದರ ಏರಿಕೆಯ ವಿರುದ್ಧ ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇತ್ತು. ಇದನ್ನು ಮನಗಂಡ ಬಿಎಂಆರ್ಸಿಎಲ್, ಮುನ್ನೆಚ್ಚರಿಕಾ ಕ್ರಮವಾಗಿ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿತ್ತು. ವಿಶೇಷವಾಗಿ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣ ಸೇರಿದಂತೆ ಪ್ರಮುಖ ನಿಲ್ದಾಣಗಳಿಗೆ ರಕ್ಷಣೆ ಒದಗಿಸಲು ದೂರು ನೀಡಲಾಗಿತ್ತು. ಆದರೆ ದರ ಏರಿಕೆ ರದ್ದಾಗಿರುವುದರಿಂದ ಈಗ ಪರಿಸ್ಥಿತಿ ಶಾಂತವಾಗಿದೆ.





