ಮುಂಬೈ: ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಭಾರಿ ವಿಮಾನ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ರನ್‌ವೇಯಲ್ಲಿ ಚಲಿಸುತ್ತಿದ್ದ (ಟ್ಯಾಕ್ಸಿ ಮಾಡುವಾಗ) ಏರ್ ಇಂಡಿಯಾ ಮತ್ತು ಇಂಡಿಗೋ ಸಂಸ್ಥೆಯ ಎರಡು ವಿಮಾನಗಳ ರೆಕ್ಕೆಗಳ ತುದಿಗಳು (Wing-tips) ಪರಸ್ಪರ ಡಿಕ್ಕಿ ಹೊಡೆದವು. ಈ ಘಟನೆಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತಾದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ನಡೆದದ್ದು ಹೇಗೆ?
ವಿಮಾನಗಳು ಹಾರಾಟಕ್ಕೆ ಸಿದ್ಧವಾಗುತ್ತಿದ್ದಾಗ ಅಥವಾ ರನ್‌ವೇಯಿಂದ ನಿಲುಗಡೆ ಪ್ರದೇಶಕ್ಕೆ ಬರುತ್ತಿದ್ದಾಗ (ಟ್ಯಾಕ್ಸಿಂಗ್) ಈ ಅವಘಡ ಸಂಭವಿಸಿದೆ. ಇಂಡಿಗೋ ವಿಮಾನ 6E 791 ಮತ್ತು ಏರ್ ಇಂಡಿಯಾ ವಿಮಾನ AI 2732 ಒಂದೇ ಸಮಯದಲ್ಲಿ ಹತ್ತಿರದಲ್ಲಿದ್ದ ಕಾರಣ, ಅವುಗಳ ರೆಕ್ಕೆಯ ತುದಿಗಳು ಪರಸ್ಪರ ಸ್ಪರ್ಶಿಸಿವೆ.
ಪ್ರಯಾಣಿಕರು ಸುರಕ್ಷಿತ
ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ವರ್ಗ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳು ದೃಢಪಡಿಸಿವೆ.
BREAKING: ಏರ್ ಇಂಡಿಯಾ ಡ್ರೀಮ್ ಲೈನರ್ ವಿಮಾನ ತುರ್ತು ಲ್ಯಾಂಡಿಂಗ್
ನವದೆಹಲಿ: ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವೊಂದರಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗೆ ಸಂಬಂಧಿಸಿದ ಗಂಭೀರ ತಾಂತ್ರಿಕ ದೋಷ ಕಂಡುಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ AI 132 ವಿಮಾನದಲ್ಲಿ ಈ ದೋಷ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಪೈಲಟ್ ಜಾಗರೂಕತೆಯಿಂದ ತಪ್ಪಿದ ಅಪಾಯ
ವಿಮಾನದ ಎಡ ಇಂಜಿನ್‌ನ ಇಂಧನ ನಿಯಂತ್ರಣ ಸ್ವಿಚ್ (Fuel Control Switch) ಎಂಜಿನ್ ಸ್ಟಾರ್ಟ್ ಆಗುವ ಸಮಯದಲ್ಲಿ ಎರಡು ಬಾರಿ ರನ್ (RUN) ಸ್ಥಾನದಲ್ಲಿ ಉಳಿಯಲು ವಿಫಲವಾಗಿತ್ತು. ಬದಲಿಗೆ ಅದು ತಾನಾಗಿಯೇ ‘ಕಟ್‌ಆಫ್’ (CUTOFF) ಸ್ಥಾನಕ್ಕೆ ಸ್ಥಳಾಂತರಗೊಂಡಿತು. ಇದನ್ನು ತಕ್ಷಣವೇ ಗಮನಿಸಿದ ಪೈಲಟ್, ವಿಮಾನದ ಹಾರಾಟವನ್ನು ರದ್ದುಗೊಳಿಸಿ ದೋಷದ ಬಗ್ಗೆ ವರದಿ ಮಾಡಿದರು.
ಪೈಲಟ್ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ನಾವು, ವಿಮಾನವನ್ನು ತಪಾಸಣೆಗಾಗಿ ನೆಲಕ್ಕೆ ಇಳಿಸಿದ್ದೇವೆ. ಮೂಲ ಉಪಕರಣ ತಯಾರಕರಾದ (OEM) ಬೋಯಿಂಗ್ ಕಂಪನಿಯನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಆದ್ಯತೆಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ವಕ್ತಾರರು ವಿವರಿಸಿದ್ದಾರೆ.
ನಾಗರಿಕ ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ಡಿಜಿಸಿಎಗೆ (DGCA) ಈ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಡಿಜಿಸಿಎ ಸೂಚನೆಯ ಮೇರೆಗೆ ಏರ್ ಇಂಡಿಯಾ ತನ್ನ ಬಳಿ ಇರುವ ಎಲ್ಲಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಸದ್ಯದ ಮಾಹಿತಿ ಪ್ರಕಾರ, ಇತರ ಯಾವುದೇ ವಿಮಾನಗಳಲ್ಲಿ ಇಂತಹ ದೋಷಗಳು ಕಂಡುಬಂದಿಲ್ಲ.
ಇದೇ ಸರಣಿಯ ವಿಮಾನ ಅಹಮದಾಬಾದ್ ನಲ್ಲಿ ಪತನವಾಗಿತ್ತು
ಈ ತಾಂತ್ರಿಕ ದೋಷವು ವಿಮಾನಯಾನ ಕ್ಷೇತ್ರದಲ್ಲಿ ಆತಂಕ ಮೂಡಿಸಲು ಮುಖ್ಯ ಕಾರಣ 2025ರ ಜುಲೈನಲ್ಲಿ ನಡೆದ ಭೀಕರ ಘಟನೆ. ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ಡ್ರೀಮ್‌ಲೈನರ್ ಅಪಘಾತಕ್ಕೀಡಾಗಿ 260 ಮಂದಿ ಸಾವನ್ನಪ್ಪಿದ್ದರು. ಆ ಪ್ರಕರಣದ ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಇಂಜಿನ್ ಇಂಧನ ನಿಯಂತ್ರಣ ಸ್ವಿಚ್‌ಗಳು ಆಫ್ ಆಗಿದ್ದರಿಂದ ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡು ದುರಂತ ಸಂಭವಿಸಿತ್ತು.
ಈ ಹಿನ್ನೆಲೆಯಲ್ಲಿ, ಈಗ ಪತ್ತೆಯಾಗಿರುವ ದೋಷವು ಹಿಂದಿನ ಅಪಘಾತದ ಮಾದರಿಯಲ್ಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮಗೆ ಮೊದಲ ಆದ್ಯತೆ ಎಂದು ಏರ್ ಇಂಡಿಯಾ ಪುನರುಚ್ಚರಿಸಿದೆ. ತಾಂತ್ರಿಕ ತಂಡವು ಈಗ ದೋಷದ ಮೂಲ ಕಾರಣವನ್ನು ಪತ್ತೆಹಚ್ಚುವಲ್ಲಿ ನಿರತವಾಗಿದೆ.





