ಬದುಕು ಎಂಬುದು ಕೆಲವೊಮ್ಮೆ ಊಹಿಸಲಾಗದ ತಿರುವುಗಳನ್ನು ನೀಡುತ್ತದೆ. ಒಂದು ಸುಂದರ ಕುಟುಂಬ, ಪ್ರೀತಿಯ ಪತಿ, ನೆಮ್ಮದಿಯ ಮನೆ-ಇವೆಲ್ಲವೂ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಮನುಷ್ಯನ ಸ್ಥಿತಿ ಏನಾಗಬೇಡ ? ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಲ್ಲಿ ವಾಸವಿದ್ದ 55 ವರ್ಷದ ರಿಯಾ ಹೋಮ್ಸ್ ಅವರ ಜೀವನದಲ್ಲಿ ಸಂಭವಿಸಿದ್ದು ಅಂತಹದ್ದೇ ಒಂದು ದುರಂತ. ಆದರೆ, ಈ ಕತ್ತಲೆಯ ಹಾದಿಯಲ್ಲಿ ದಾರಿದೀಪವಾಗಿ ಬಂದಿದ್ದು ಒಬ್ಬ ಪೊಲೀಸ್ ಅಧಿಕಾರಿಯ ಸಣ್ಣ ಕರುಣೆ. ಇಂದು ರಿಯಾ ಅವರ ಬದುಕು ಮತ್ತೆ ಹೊಸ ಆಯಾಮ ಪಡೆದುಕೊಂಡಿದೆ.
ರಿಯಾ ಹೋಮ್ಸ್ ಅವರ ಪತಿ ಎಡ್ಡಿ 2020ರಲ್ಲಿ ನಿಧನರಾದರು, ಆಗಿನಿಂದ ರಿಯಾ ಸಂಪೂರ್ಣವಾಗಿ ಕುಸಿದುಹೋದರು. 26 ವರ್ಷಗಳ ಸುದೀರ್ಘ ದಾಂಪತ್ಯದ ನೆನಪುಗಳು ಅವರನ್ನು ತೀವ್ರ ಖಿನ್ನತೆಗೆ ದೂಡಿದವು. ದುಃಖದ ನಡುವೆ ಕೆಲಸ ಕಳೆದುಕೊಂಡ ಅವರಿಗೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಲಿಲ್ಲ. ಕೊನೆಗೆ ವಾಸವಿದ್ದ ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಯಿತು. ಹೋಗಲು ಬೇರೆ ದಾರಿಯಿಲ್ಲದಿದ್ದಾಗ, ರಿಯಾ ಆರಿಸಿಕೊಂಡಿದ್ದು ತಮ್ಮ ಪತಿಯ ಸಮಾಧಿಯ ಪಕ್ಕದ ಜಾಗವನ್ನು.
Officer James Pastorello, a 9-year veteran with the Syracuse Police Department, saw a woman struggling to carry a box of groceries while walking through Thornden Park in very cold weather. He kindly asked if she needed a ride. She got emotional and told him she was headed to… pic.twitter.com/A0fAC5hv2u
— Mr PitBull (@MrPitbull07) January 26, 2026
ಸಮಾಧಿಯ ಮೇಲೆ 8 ತಿಂಗಳ ವಾಸ
ಯಾರಿಗೂ ತಿಳಿಯದಂತೆ ಸಮಾಧಿಯ ಮೇಲೆ ಪ್ಲಾಸ್ಟಿಕ್ ಶೀಟ್ ಹಾಸಿ ಮಲಗುತ್ತಿದ್ದರು ರಿಯಾ. ಹಗಲಿನಲ್ಲಿ ಹತ್ತಿರದ ಚರ್ಚ್ ಮತ್ತು ಹೋಟೆಲ್ಗಳಲ್ಲಿ ಸ್ವಯಂಸೇವೆ ಮಾಡುತ್ತಾ ಸಿಕ್ಕ ಅಲ್ಪ-ಸ್ವಲ್ಪ ಆಹಾರದಲ್ಲಿ ಬದುಕು ಸಾಗಿಸುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಪತಿಯ ನೆನಪಿನಲ್ಲಿ ಸಮಾಧಿಯ ಪಕ್ಕವೇ ಮಲಗುತ್ತಿದ್ದರು. ಅತಿಯಾದ ಚಳಿ, ಮಳೆ ಎನ್ನದೆ ಸುಮಾರು ಎಂಟು ತಿಂಗಳ ಕಾಲ ಅವರು ಅಲ್ಲಿಯೇ ದಿನ ಕಳೆದಿದ್ದರು.
ದೇವದೂತನಂತೆ ಬಂದ ಜಾಮಿ ಪಾಸೊರೆಲ್ಲೊ:
2025ರ ಡಿಸೆಂಬರ್ 13ರ ಕಡು ಚಳಿಯ ದಿನವದು. ಸಿರಾಕ್ಯೂಸ್ ಪೊಲೀಸ್ ಅಧಿಕಾರಿ ಜಾಮಿ ಪಾಸೊರೆಲ್ಲೊ ಪೆಟ್ರೋಲಿಂಗ್ ಮಾಡುತ್ತಿದ್ದಾಗ, ಕೈಯಲ್ಲಿ ಸಾಮಾನುಗಳನ್ನು ಹಿಡಿದು ಗುಡ್ಡ ಹತ್ತಲು ಕಷ್ಟಪಡುತ್ತಿದ್ದ ರಿಯಾಳನ್ನು ಗಮನಿಸಿದರು. ಮಾನವೀಯತೆಯ ದೃಷ್ಟಿಯಿಂದ ಜಾಮಿ ಆಕೆಗೆ ಲಿಫ್ಟ್ ನೀಡಿ ಸ್ಮಶಾನದವರೆಗೆ ಬಿಟ್ಟರು. ದಾರಿಯುದ್ದಕ್ಕೂ ರಿಯಾ ತಮ್ಮ ಪತಿ ಮತ್ತು ಹಳೆಯ ಬದುಕಿನ ಬಗ್ಗೆ ಮಾತನಾಡಿದ್ದರು. ಆದರೆ, ಆಕೆ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂಬ ಕಲ್ಪನೆ ಮಾತ್ರ ಜಾಮಿಗೆ ಇರಲಿಲ್ಲ.
ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ರಿಯಾ ಮತ್ತು ಜಾಮಿಯ ಫೋಟೋ ಹಂಚಿಕೊಂಡಾಗ ಸತ್ಯ ಬಯಲಿಗೆ ಬಂತು. ಸ್ಮಶಾನದ ಸಿಬ್ಬಂದಿಯೊಬ್ಬರು ರಿಯಾ ಅಲ್ಲಿಯೇ ವಾಸಿಸುತ್ತಿರುವುದನ್ನು ತಿಳಿಸಿದಾಗ ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿತು.
What began as a short ride turned into a lifeline for a grieving widow living quietly in a cemetery. https://t.co/8VXiUnSNKY
— TODAY (@TODAYshow) January 27, 2026
ಬದಲಾದ ಬದುಕು ಮತ್ತು ಹರಿದುಬಂದ ನೆರವು:
ರಿಯಾಳ ಪರಿಸ್ಥಿತಿ ತಿಳಿದ ತಕ್ಷಣ ಅಧಿಕಾರಿ ಜಾಮಿ ಕಾರ್ಯಪ್ರವೃತ್ತರಾದರು. ಮೊದಲು ಅವರಿಗೆ ಹೋಟೆಲ್‌ನಲ್ಲಿ ವಸತಿ ಕಲ್ಪಿಸಿ, ನಂತರ ‘GoFundMe’ ಮೂಲಕ ದೇಣಿಗೆ ಸಂಗ್ರಹಿಸಿದರು. ರಿಯಾ ಅವರ ಕಥೆ ಕೇಲಿ ಹಲವರು ಅವರಿಗೆ ದೇಣಿಗೆ ನೀಡಿದ್ದರು. ಅದರಲ್ಲಿ ಬರೋಬ್ಬರಿ 27,000 ಡಾಲರ್‌ಗೂ (ಸುಮಾರು 22 ಲಕ್ಷ ರೂ.) ಹೆಚ್ಚು ಹಣ ಸಂಗ್ರಹವಾಯಿತು. ಲೆಮೊಯ್ ಕಾಲೇಜಿನ ಅಧ್ಯಕ್ಷೆ ಲಿಂಡಾ ಲೆಮುರಾ ಕೂಡ ರಿಯಾಗೆ ಬೆನ್ನೆಲುಬಾಗಿ ನಿಂತರು.
ಹೊಸ ಮನೆ, ಹೊಸ ಜೀವನ:
ಜನವರಿ 5, 2026ರಂದು ರಿಯಾ ಒಂದು ಸುಸಜ್ಜಿತವಾದ ಹೊಸ ಮನೆಗೆ ಕಾಲಿಟ್ಟರು. ಕಳೆದುಹೋದ ನೆಮ್ಮದಿ ಮತ್ತೆ ಮರಳಿತು. ನನಗೆ ಸಹಾಯದ ಅಗತ್ಯವಿದ್ದಾಗ ದೇವರು ಜಾಮಿಯ ರೂಪದಲ್ಲಿ ಬಂದರು ಎಂದು ರಿಯಾ ಕಣ್ಣೀರು ಹಾಕುತ್ತಾರೆ. ಇಂದು ಜಾಮಿ ಮತ್ತು ರಿಯಾ ನಡುವೆ ಅಣ್ಣ-ತಂಗಿಯಂತಹ ಆತ್ಮೀಯ ಸ್ನೇಹವಿದೆ.
ಒಂದು ಸಣ್ಣ ಕರುಣೆ, ಒಬ್ಬ ವ್ಯಕ್ತಿಯ ಬದುಕನ್ನೇ ಹೇಗೆ ಬದಲಿಸಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಬದುಕು ದಿಕ್ಕು ತಪ್ಪಿದಾಗ ಸರಿಯಾದ ದಿಕ್ಕನ್ನು ತೋರಿಸಲು ಒಬ್ಬ ಮಾನವೀಯತೆಯುಳ್ಳ ನಾಯಕ ಸಿಕ್ಕರೆ ಸಾಕು, ಹಡಗು ಸುಭದ್ರವಾಗಿ ದಡ ಸೇರುತ್ತದೆ. ಅಧಿಕಾರಿ ಜಾಮಿಯಂತಹ ಮನುಷ್ಯತ್ವದ ಕಾಯಕಕ್ಕೆ ನಮ್ಮದೊಂದು ಸೆಲ್ಯೂಟ್!





