ಬೆಂಗಳೂರು: ಗಾಳಿಪಟ ಹಾರಿಸುವುದು ಒಂದು ಸಂಭ್ರಮದ ಆಟವಿರಬಹುದು, ಆದರೆ ಅದೇ ಆಟಕ್ಕೆ ಬಳಸುವ ಹರಿತವಾದ ದಾರಗಳು ಈಗ ಅಮಾಯಕರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿವೆ. ಗಾಳಿಪಟದ ದಾರ ಸಿಲುಕಿ ಯುವಕನೋರ್ವನ ಕಾಲಿನ ನರಗಳು ಕಟ್ ಆಗಿರುವ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ.
ಜನವರಿ 31ರಂದು ನಾಗಾರ್ಜುನ ಎಂಬ ಯುವಕ ಆರ್.ಟಿ. ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ದಾರವೊಂದು ಮೊದಲು ಬೈಕ್ ಸವಾರನಿಗೆ ತಗುಲಿದೆ. ಬೈಕ್ ಸವಾರ ಹೇಗೋ ತಪ್ಪಿಸಿಕೊಂಡು ಮುಂದೆ ಹೋದರೂ, ಆ ದಾರ ನಾಗಾರ್ಜುನನ ಕಾಲಿಗೆ ಸುತ್ತಿಕೊಂಡಿದೆ.
ಬಳಿಕ ಅದೇ ಕ್ಷಣದಲ್ಲಿ ಹಿಂದಿನಿಂದ ಬಂದ ಕಾರೊಂದು ನೆಲದ ಮೇಲಿದ್ದ ದಾರವನ್ನು ಎಳೆದುಕೊಂಡು ಹೋಗಿದೆ. ಕಾರು ವೇಗವಾಗಿ ಚಲಿಸಿದಾಗ ನಾಗಾರ್ಜುನನ ಕಾಲಿಗೆ ಸುತ್ತಿಕೊಂಡಿದ್ದ ದಾರ ಬಿಗಿಯಾಗಿ ಎಳೆಯಲ್ಪಟ್ಟಿದೆ. ನೈಲಾನ್ ದಾರವು ಚಾಕುವಿಗಿಂತಲೂ ಹರಿತವಾಗಿದ್ದರಿಂದ, ನಾಗಾರ್ಜುನನ ಕಾಲಿನ ಮೂರು ಪ್ರಮುಖ ನರಗಳು ಕ್ಷಣಾರ್ಧದಲ್ಲಿ ಕಟ್ ಆಗಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಏನಿದು ಚೈನೀಸ್ ಮಾಂಜಾ ?
ಸಾಮಾನ್ಯವಾಗಿ ಗಾಳಿಪಟ ಹಾರಿಸಲು ಬಳಸುವ ದಾರಗಳಿಗೆ ಗಾಜಿನ ಪುಡಿ ಮತ್ತು ಅಂಟು ಸವರಿ ಹರಿತಗೊಳಿಸಲಾಗುತ್ತದೆ. ಇದನ್ನು ‘ಮಾಂಜಾ’ ಎನ್ನಲಾಗುತ್ತದೆ. ವಿಶೇಷವಾಗಿ ನೈಲಾನ್‌ನಿಂದ ತಯಾರಿಸಿದ ಚೈನೀಸ್ ಮಾಂಜಾ ದಾರಗಳು ಅಪ್ಪಿತಪ್ಪಿ ಮೈಗೆ ತಗುಲಿದರೆ ಚರ್ಮ ಮತ್ತು ಮಾಂಸಖಂಡಗಳನ್ನು ಆಳವಾಗಿ ಕತ್ತರಿಸುತ್ತವೆ. ಈ ದಾರಗಳು ಕುತ್ತಿಗೆಗೆ ತಗುಲಿದರೆ ಸ್ಥಳದಲ್ಲೇ ಸಾವನ್ನಪ್ಪುವ ಸಾದ್ಯತೆ ಇದೆ.
ಸವಾರರು ಮತ್ತು ಪಾದಚಾರಿಗಳೇ ಎಚ್ಚರ !
ಗಾಳಿಪಟದ ದಾರಗಳು ಗಾಳಿಯಲ್ಲಿ ತೇಲುತ್ತಿರುವುದರಿಂದ ವಾಹನ ಸವಾರರಿಗೆ ಕಣ್ಣಿಗೆ ಕಾಣಿಸುವುದಿಲ್ಲ. ಈ ಅಪಾಯದಿಂದ ಪಾರಾಗಲು ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ:
-
ಸ್ಕಾರ್ಫ್ ಧರಿಸಿ: ಬೈಕ್ ಸವಾರರು ಫ್ಲೈಓವರ್‌ಗಳಲ್ಲಿ ಅಥವಾ ತೆರೆದ ರಸ್ತೆಗಳಲ್ಲಿ ಸಂಚರಿಸುವಾಗ ಕುತ್ತಿಗೆಗೆ ದಪ್ಪನೆಯ ಸ್ಕಾರ್ಫ್ ಅಥವಾ ಮಫ್ಟರ್ ಧರಿಸುವುದು ಉತ್ತಮ.
-
ವೇಗದ ಮೇಲೆ ನಿಯಂತ್ರಣ: ದಾರಗಳು ಅಡ್ಡ ಬರುವುದು ಗೊತ್ತಾದ ತಕ್ಷಣ ವಾಹನ ನಿಲ್ಲಿಸಿ, ದಾರವನ್ನು ಕಿತ್ತು ಹಾಕಬೇಕು.
-
ಸುರಕ್ಷಿತ ವಿಲೇವಾರಿ: ರಸ್ತೆಯಲ್ಲಿ ಬಿದ್ದಿರುವ ದಾರಗಳನ್ನು ಕಂಡರೆ ಸುರುಳಿ ಸುತ್ತಿ ಸುಟ್ಟು ಹಾಕಬೇಕು ಅಥವಾ ಕಸದ ಡಬ್ಬಿಗೆ ಹಾಕಬೇಕು. ಅದು ಹಾಗೆಯೇ ಬಿದ್ದಿದ್ದರೆ ಬೇರೆಯವರ ಜೀವಕ್ಕೆ ಅಪಾಯ ತರುತ್ತದೆ.
-
ಹತ್ತಿ ದಾರ ಬಳಸಿ: ಗಾಳಿಪಟ ಹಾರಿಸುವ ಹವ್ಯಾಸ ಇದ್ದವರು ಕೇವಲ ಸಾಂಪ್ರದಾಯಿಕ ಹತ್ತಿ ದಾರಗಳನ್ನು ಬಳಸಬೇಕು. ನೈಲಾನ್ ದಾರಗಳ ಬಳಕೆ ಶಿಕ್ಷಾರ್ಹ ಅಪರಾಧ.
ಸಾರ್ವಜನಿಕರ ಹಿತದೃಷ್ಟಿಯಿಂದ ಚೈನೀಸ್ ಮಾಂಜಾ ಮಾರಾಟ ಮತ್ತು ಬಳಕೆಯ ಮೇಲೆ ಸರ್ಕಾರ ನಿಷೇಧ ಹೇರಿದ್ದರೂ, ಕದ್ದುಮುಚ್ಚಿ ಮಾರಾಟ ನಡೆಯುತ್ತಲೇ ಇದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.





