ಕೇವಲ ಒಂದು ಇನ್‌ಸ್ಟಾಗ್ರಾಮ್ ರೀಲ್ ಅಥವಾ ಶಾರ್ಟ್ ವಿಡಿಯೋಗಾಗಿ ಯುವಕರ ಗುಂಪೊಂದು ದೇಶದ ಹೆಮ್ಮೆಯ ಹೈ-ಸ್ಪೀಡ್ ರೈಲು ವಂದೇ ಭಾರತ್ ಅನ್ನೇ ತಡೆದಿದೆ. ಸದಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕರ ಗುಂಪೊಂದು ರೈಲ್ವೆ ಹಳಿಯ ಮೇಲೆ ದೊಡ್ಡ ಮರದ ದಿಮ್ಮಿಗಳನ್ನು ಇರಿಸಿದ್ದಾರೆ. ಅತಿ ವೇಗವಾಗಿ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ (ಚಾಲಕ), ಹಳಿಯ ಮೇಲಿದ್ದ ಅಡ್ಡಿಯನ್ನು ಕಂಡು ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ರೈಲು ನಿಲ್ಲುತ್ತಿದ್ದಂತೆಯೇ ಅಡಗಿದ್ದ ಯುವಕರು ಹೊರಬಂದು, ನೋಡಿ, ನಾವು ವಂದೇ ಭಾರತ್ ರೈಲನ್ನೇ ನಿಲ್ಲಿಸಿಬಿಟ್ಟೆವು, ನಾವು ರೈಲು ಹತ್ತಲು ಹೀಗೆ ಮಾಡಿಲ್ಲ, ಕೇವಲ ವಿಡಿಯೋಗಾಗಿ ಮಾಡಿದ್ದು ಎಂದು ಹರ್ಷೋದ್ಗಾರ ಮಾಡುತ್ತಾ ಸಂತೋಷಪಟ್ಟಿದ್ದಾರೆ. ಈ ಘಟನೆಯು ಎಲ್ಲಿ ನಡೆದಿದೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಈ ವಿಡಿಯೋ ಅಂತರ್ಜಾಲದಲ್ಲಿ ಭಾರಿವೈರಲ್ ಆಗಿದೆ.
ರೈಲ್ವೆ ಸಚಿವರಿಗೆ ಮನವಿ
ನೂರಾರು ಪ್ರಯಾಣಿಕರು ಪ್ರಯಾಣಿಸುವ ಹೈ-ಸ್ಪೀಡ್ ರೈಲನ್ನು ಇಷ್ಟು ಬೇಜವಾಬ್ದಾರಿಯಿಂದ ತಡೆಯುವುದು ಕೇವಲ ತಮಾಷೆಯಲ್ಲ, ಇದೊಂದು ಉಗ್ರಕೃತ್ಯಕ್ಕೆ ಸಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ವೇಗವಾಗಿ ಬರುವ ರೈಲಿಗೆ ಈ ರೀತಿ ಅಡ್ಡಿಪಡಿಸುವುದರಿಂದ ರೈಲು ಹಳಿ ತಪ್ಪಿ (Derailment) ನೂರಾರು ಜನರ ಸಾವು-ನೋವಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಟ್ವಿಟರ್ (X) ನಲ್ಲಿ ಅನೇಕರು ಈ ವಿಡಿಯೋವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿದ್ದು, ಇಂತಹ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಇಂತಹ ರೀಲ್ಸ್ ಮಾಡುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಕ್ರಮ ಕೈಗೊಳ್ಳಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ.
ರೈಲ್ವೆ ಇಲಾಖೆಯ ಎಚ್ಚರಿಕೆ
ಭಾರತೀಯ ರೈಲ್ವೆ ಇಲಾಖೆಯು ಈ ಹಿಂದೆಯೇ ರೈಲ್ವೆ ಹಳಿಗಳ ಮೇಲೆ ವಿಡಿಯೋ ಮಾಡುವುದು, ಫೋಟೋ ತೆಗೆಯುವುದು ಅಥವಾ ಸ್ಟಂಟ್ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದೆ. ಇಂತಹ ಕೃತ್ಯಗಳು ರೈಲ್ವೆ ಆಸ್ತಿಪಾಸ್ತಿಗೆ ಹಾನಿ ಮಾಡುವುದಲ್ಲದೆ, ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ (RPF) ತನಿಖೆ ಆರಂಭಿಸಿದ್ದು, ವಿಡಿಯೋ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.
ತಾಂತ್ರಿಕ ಪ್ರಗತಿ ಮತ್ತು ಸೋಷಿಯಲ್ ಮೀಡಿಯಾಗಳು ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಬಹುದು, ಆದರೆ ಅದು ಇತರರ ಜೀವಕ್ಕೆ ಅಪಾಯ ತರುವಂತಿರಬಾರದು. ವಿಕೃತ ಸಂತೋಷಕ್ಕಾಗಿ ಮಾಡುವ ಇಂತಹ ಸಾಹಸಗಳು ಜೈಲು ಪಾಲಾಗುವಂತೆ ಮಾಡಬಹುದು ಎಂಬ ಅರಿವು ಯುವಜನತೆಯಲ್ಲಿ ಮೂಡಬೇಕಿದೆ.





