ಬಡವರ ಹಾಗೂ ಮಧ್ಯಮ ವರ್ಗದ ಆಪತ್ಭಾಂದವ ಎಂದರೆ ಅದುವೇ ಚಿನ್ನ. ಆದರೆ ಇತ್ತೀಚಿಗೆ ಚಿನ್ನವನ್ನು ಖರೀದಿಸುವುದು ಸಾಮಾನ್ಯ ಜನರ ಪಾಲಿಗೆ ಕನಸಿನ ಮಾತಾಗುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಚಿನ್ನದ ದರವು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಜನವರಿ 2026ರ ವೇಳೆಗೆ ಬೆಲೆ ಕೇಳಿದರೆ ಸಾಮಾನ್ಯ ಗ್ರಾಹಕರು ಬೆಚ್ಚಿಬೀಳುವಂತಿದೆ. ಜುಲೈ 2025 ರಿಂದ ಜನವರಿ 2026ರ ವರೆಗಿನ ದರ ಏರಿಕೆಯ ಗ್ರಾಫ್ ಅನ್ನು ಗಮನಿಸಿದರೆ, ಇದು ಹೂಡಿಕೆದಾರರಿಗೆ ಲಾಭದಾಯಕವಾಗಿದ್ದರೂ, ಮದುವೆ ಹಾಗೂ ಶುಭ ಸಮಾರಂಭಗಳ ಸಿದ್ಧತೆಯಲ್ಲಿರುವ ಮಧ್ಯಮ ವರ್ಗದವರಿಗೆ ಭಾರಿ ಹೊರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
6 ತಿಂಗಳ ಏರಿಕೆಯ ಚಿತ್ರಣ
ಕಳೆದ ಆರು ತಿಂಗಳಲ್ಲಿ ಚಿನ್ನದ ದರವು ಹೇಗೆ ಹಂತಹಂತವಾಗಿ ಏರುತ್ತಾ ಬಂತು ಎಂಬ ಕುತೂಹಲಕಾರಿ ಅಂಕಿಅಂಶ ಇಲ್ಲಿದೆ:
| ತಿಂಗಳು (2025-26) | 10 ಗ್ರಾಂ ಚಿನ್ನದ ಬೆಲೆ (ಅಂದಾಜು) |
| ಜುಲೈ 2025 | ₹92,000 |
| ಆಗಸ್ಟ್ 2025 | ₹94,000 |
| ಸೆಪ್ಟೆಂಬರ್ 2025 | ₹1,04,000 |
| ಅಕ್ಟೋಬರ್ 2025 | ₹1,15,000 |
| ನವೆಂಬರ್ 2025 | ₹1,28,000 |
| ಡಿಸೆಂಬರ್ 2025 | ₹1,35,000 |
| ಜನವರಿ 2026 | ₹1,43,000 |
ಸೆಪ್ಟೆಂಬರ್ 2025ರ ಅವಧಿಯಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆ 10 ಗ್ರಾಂಗೆ 1 ಲಕ್ಷ ರೂಪಾಯಿಯ ಗಡಿ ದಾಟುವ ಮೂಲಕ ಇತಿಹಾಸ ನಿರ್ಮಿಸಿತು. ಅಕ್ಟೋಬರ್‌ನಿಂದ ನವೆಂಬರ್ ಅವಧಿಯಲ್ಲಿ ಬೆಲೆಯಲ್ಲಿ ಸುಮಾರು ₹13,000 ದಷ್ಟು ಭಾರಿ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಆರ್ಥಿಕ ಅನಿಶ್ಚಿತತೆ, ಡಾಲರ್ ಮೌಲ್ಯದಲ್ಲಿನ ಏರಿಳಿತ ಮತ್ತು ಹಬ್ಬದ ಸೀಸನ್‌ನಲ್ಲಿ ಹೆಚ್ಚಾದ ಬೇಡಿಕೆ ಇವೆಲ್ಲವೂ ಚಿನ್ನದ ದರ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ.
ಚಿನ್ನದ ಬೆಲೆ ಏರುತ್ತಲೇ ಇರುವುದರಿಂದ ಹೂಡಿಕೆದಾರರು ಬಂಗಾರದ ಮೇಲೆ ಹಣ ಹೂಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸುರಕ್ಷಿತ ಹೂಡಿಕೆಯಾಗಿ ಚಿನ್ನವು ಈಗಲೂ ಮೊದಲ ಆದ್ಯತೆಯಾಗಿ ಉಳಿದಿದೆ. ಆದರೆ, ಆಭರಣ ಪ್ರಿಯರಿಗೆ ಮತ್ತು ಮದುವೆ ಸೀಸನ್ ಎದುರು ನೋಡುತ್ತಿರುವ ಕುಟುಂಬಗಳಿಗೆ ಈ ಬೆಲೆ ಏರಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜುಲೈನಲ್ಲಿ 92 ಸಾವಿರ ರೂಪಾಯಿಯಿದ್ದ ಚಿನ್ನವು ಕೇವಲ ಆರು ತಿಂಗಳಲ್ಲಿ 1.43 ಲಕ್ಷ ರೂಪಾಯಿಗೆ ತಲುಪಿರುವುದು ಸಾಮಾನ್ಯ ಆರ್ಥಿಕ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗುತ್ತದೆಯೇ ಅಥವಾ ಮತ್ತಷ್ಟು ಏರಿಕೆ ಕಾಣುತ್ತದೆಯೇ ಎಂಬುದು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಮೇಲೆ ನಿಂತಿದೆ. ಸದ್ಯ ಬೆಲೆ ಏರಿಕೆಯಿಂದ ಗ್ರಾಹಕರು ಹೌಹಾರಿದ್ದು, ಈ ದರ ಏರಿಕೆಗೆ ಈ ಮೇಲಿನ ಅಂಶಗಳು ಕಾರಣವಾಗಿದೆ.





