ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಇಂಡಿಯನ್ ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್ ಇತ್ತೀಚೆಗೆ ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ತಮಗೆ ಸಿಗಬೇಕಾದಷ್ಟು ಅವಕಾಶಗಳು ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರೆಹಮಾನ್ ಆರೋಪವೇನು?
ರೆಹಮಾನ್ ಅವರ ಪ್ರಕಾರ, ಬಾಲಿವುಡ್‌ನ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ. ಇಂದು ಚಿತ್ರರಂಗದಲ್ಲಿ ಸೃಜನಶೀಲರಲ್ಲದ ಜನರು (Non-creatives) ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಹೊಂದಿದ್ದಾರೆ. ಇದು ನನ್ನ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಿದ್ದಾರೆ.
ತಮಗೆ ಅವಕಾಶಗಳು ತಪ್ಪುತ್ತಿರುವುದಕ್ಕೆ ಧರ್ಮದ ಕಾರಣವೂ ಇರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಇದು ನೇರವಾಗಿ ನನ್ನ ಮುಂದೆ ನಡೆಯುತ್ತಿಲ್ಲ, ಆದರೂ ನನಗೆ ವಿಷಯ ತಿಳಿಯುತ್ತದೆ. ನನ್ನನ್ನು ಒಂದು ಚಿತ್ರಕ್ಕೆ ಆಯ್ಕೆ ಮಾಡಿದ ನಂತರ, ಮ್ಯೂಸಿಕ್ ಕಂಪನಿಗಳು ತಮ್ಮದೇ ಆದ ಐದು ಕಂಪೋಸರ್ಗಳನ್ನು ನೇಮಿಸಿಕೊಳ್ಳುತ್ತವೆ. ಇದು ಸಣ್ಣತನ ಮತ್ತು ಸ್ವಾರ್ಥದ ಪರಮಾವಧಿ ಎಂದು ಅವರು ಕಿಡಿಕಾರಿದ್ದಾರೆ.
ರಾಜನಿಂದ ಅಥವಾ ಭಿಕ್ಷುಕನಿಂದ, ಒಳ್ಳೆಯವರಿಂದ ಅಥವಾ ಕೆಟ್ಟವರಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು ಎಂದು ಪ್ರವಾದಿ ಹೇಳಿದ್ದರು. ನಾವು ಸ್ವಾರ್ಥವನ್ನು ಮೀರಿ ಬೆಳೆಯಬೇಕು. ಅಲ್ಲದೆ, ತಾವು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದರಿಂದ ರಾಮಾಯಣ ಮತ್ತು ಮಹಾಭಾರತದ ಜ್ಞಾನ ತಮಗಿದೆ ಎಂದು ಅವರು ತಿಳಿಸಿದ್ದಾರೆ.
ರೆಹಮಾನ್ ಅವರ ಕೋಮುವಾದ ಎಂಬ ಪದದ ಬಳಕೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಅವರು ಪ್ರತಿಕ್ರಿಯಿಸಿ, ಹಿಂದಿ ಚಿತ್ರರಂಗವು ಕೋಮುವಾದದಿಂದ ಮುಕ್ತವಾಗಿದೆ. ಇಲ್ಲಿ ಯೂಸುಫ್ ಖಾನ್ (ದಿಲೀಪ್ ಕುಮಾರ್) ಅವರ ಧರ್ಮವನ್ನು ಯಾರೂ ನೋಡಿಲ್ಲ, ಮೊಹಮ್ಮದ್ ರಫಿ ಅವರು ಭಜನೆಗಳನ್ನು ಹಾಡಿ ಎಲ್ಲರ ಮನಗೆದ್ದಿದ್ದಾರೆ ಎಂದಿದ್ದಾರೆ. ಲೇಖಕಿ ಶೋಭಾ ಡೇ ಕೂಡ ರೆಹಮಾನ್ ಹೇಳಿಕೆಯನ್ನು ಅಪಾಯಕಾರಿ ಎಂದು ಕರೆದಿದ್ದಾರೆ.
ಕುತೂಹಲಕಾರಿ ವಿಷಯವೆಂದರೆ, ಇಷ್ಟೆಲ್ಲಾ ವಿವಾದಗಳ ನಡುವೆಯೂ ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ರಾಮಾಯಣಕ್ಕೆ ರೆಹಮಾನ್ ಅವರೇ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಖ್ಯಾತ ಸಂಗೀತಗಾರ ಹ್ಯಾನ್ಸ್ ಜಿಮ್ಮರ್ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಯಹೂದಿ, ನಾನು ಮುಸ್ಲಿಂ ಮತ್ತು ರಾಮಾಯಣ ಹಿಂದೂ ಧರ್ಮದ್ದು. ಭಾರತದಿಂದ ಜಗತ್ತಿಗೆ ನಾವು ಪ್ರೀತಿಯಿಂದ ಇದನ್ನು ನೀಡುತ್ತಿದ್ದೇವೆ ಎನ್ನುವ ಮೂಲಕ ಅವರು ತಮ್ಮ ಕೆಲಸದ ಬದ್ಧತೆಯನ್ನು ಸಾರಿದ್ದಾರೆ.





