ಬೆಂಗಳೂರಿನ ಉದ್ಯಾನ ನಗರಿಯ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ (Lalbagh Flower Show) ಈ ಬಾರಿಯೂ ಅಭೂತಪೂರ್ವ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. 2026ರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಈ ಪುಷ್ಪ ಕಾಶಿಯನ್ನು ಕಣ್ತುಂಬಿಕೊಳ್ಳಲು ಜನವರಿ 14ರಿಂದಲೇ ಜನರು ಮುಗಿಬೀಳುತ್ತಿದ್ದಾರೆ. ಪ್ರದರ್ಶನ ಆರಂಭವಾದ ಕೇವಲ ಎರಡೇ ದಿನಗಳಲ್ಲಿ ದಾಖಲೆ ಪ್ರಮಾಣದ ಪ್ರವಾಸಿಗರು ಭೇಟಿ ನೀಡಿದ್ದು, ತೋಟಗಾರಿಕೆ ಇಲಾಖೆಯ ಖಜಾನೆ ತುಂಬುತ್ತಿದೆ.
ಜನವರಿ 14 ರಂದು ಅಧಿಕೃತವಾಗಿ ಚಾಲನೆ ಪಡೆದ ಈ ಫ್ಲವರ್ ಶೋಗೆ ಆರಂಭಿಕ ದಿನಗಳಲ್ಲಿಯೇ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಎರಡು ದಿನಗಳಲ್ಲೇ ಒಟ್ಟು 72,740 ಪ್ರವಾಸಿಗರು ಈ ಪುಷ್ಪ ಲೋಕವನ್ನು ವೀಕ್ಷಿಸಿದ್ದಾರೆ. ಇವರಿಂದ ಹರಿದುಬಂದ ಒಟ್ಟು ಆದಾಯ ಬರೋಬ್ಬರಿ 28,34,890 ರೂಪಾಯಿಗಳು.
ಜನವರಿ 15 ರಂದು ಮಕರ ಸಂಕ್ರಾಂತಿಯ ಮರುದಿನವಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿತ್ತು. ಒಂದೇ ದಿನದಲ್ಲಿ 32,950 ಜನರು ಭೇಟಿ ನೀಡಿದ್ದರು. ಇದರಲ್ಲಿ 24,950 ವಯಸ್ಕರು ಹಾಗೂ 3,750 ಮಕ್ಕಳು ಸೇರಿದ್ದಾರೆ. ಅಂದು ಒಂದೇ ದಿನದಲ್ಲಿ 21,56,330 ರೂಪಾಯಿ ಆದಾಯ ಸಂಗ್ರಹವಾಗಿದೆ.
ಜನವರಿ 16 ರಂದು ವಾರಾಂತ್ಯದ ಹೊಸ್ತಿಲಲ್ಲಿದ್ದ ಶುಕ್ರವಾರ ಕೂಡ ಜನಸಾಗರವೇ ಹರಿದುಬಂದಿದೆ. ಒಟ್ಟು 39,790 ಮಂದಿ ಫ್ಲವರ್ ಶೋಗೆ ಭೇಟಿ ನೀಡಿದ್ದಾರೆ. ಇದರಲ್ಲಿ 15,590 ವಯಸ್ಕರು ಮತ್ತು 4,750 ಶಾಲಾ ಮಕ್ಕಳು ಸೇರಿದ್ದಾರೆ. ಒಟ್ಟು 6,78,560 ರೂಪಾಯಿ ಆದಾಯ ಹರಿದುಬಂದಿದೆ.
ಜನವರಿ 26ರವರೆಗೆ ದೃಶ್ಯ ವೈಭವ
ಗಣರಾಜ್ಯೋತ್ಸವದ ಈ ಫಲಪುಷ್ಪ ಪ್ರದರ್ಶನವು ಜನವರಿ 26ರವರೆಗೆ ನಡೆಯಲಿದೆ. ಈ ಬಾರಿ ವಿಶೇಷ ಥೀಮ್‌ಗಳ ಅಡಿಯಲ್ಲಿ ನಿರ್ಮಿಸಲಾದ ಹೂವಿನ ಕಲಾಕೃತಿಗಳು, ವಿವಿಧ ದೇಶೀಯ ಮತ್ತು ವಿದೇಶಿ ತಳಿಗಳ ಹೂವುಗಳು ಪ್ರವಾಸಿಗರ ಮನ ಸೆಳೆಯುತ್ತಿವೆ. ಮುಖ್ಯವಾಗಿ ಗಾಜಿನ ಮನೆಯಲ್ಲಿ (Glass House) ಹೂವುಗಳಿಂದ ಸೃಜಿಸಿದ ಕಲಾಕೃತಿಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಯುವಜನತೆ ಮುಗಿಬೀಳುತ್ತಿದ್ದಾರೆ.
ಪ್ರವಾಸಿಗರಿಗೆ ಸೂಚನೆಗಳು
ಮುಂದಿನ ದಿನಗಳು ವಾರಾಂತ್ಯ (ಶನಿವಾರ ಮತ್ತು ಭಾನುವಾರ) ಆಗಿರುವುದರಿಂದ ಜನಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಟ್ರಾಫಿಕ್ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಮೆಟ್ರೋ ಅಥವಾ ಸಾರ್ವಜನಿಕ ಸಾರಿಗೆ ಬಳಸುವಂತೆ ಸೂಚಿಸಲಾಗಿದೆ. ಪ್ಲಾಸ್ಟಿಕ್ ಮುಕ್ತ ವಲಯವಾಗಿರುವ ಲಾಲ್‌ಬಾಗ್‌ನಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ.





