ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪದ ವಿಡಿಯೋ ವೈರಲ್ ಆದ ನಂತರ ರಾಜಕೀಯ ಗದ್ದಲ ಎದ್ದಿದೆ. ಈ ಘಟನೆಯಲ್ಲಿ ಪೊಲೀಸರು ತಪ್ಪಿತಸ್ಥರೆಂದು ಬಿಜೆಪಿ ಆರೋಪಿಸಿದ್ದರೆ, ಪೊಲೀಸರು ಮಹಿಳೆ ತಾನೇ ಬಟ್ಟೆ ಬಿಚ್ಚಿಕೊಂಡು ಡ್ರಾಮಾ ಮಾಡಿದ್ದಾಳೆಂದು ತಳ್ಳಿಹಾಕಿದ್ದಾರೆ. ಆದರೆ ಈ ವಿವಾದದ ಮಧ್ಯೆ ಸುಜಾತಾ ಹಂಡಿಯವರ ಹಳೇ ಕ್ರಿಮಿನಲ್ ಹಿನ್ನೆಲೆ ಬಯಲಾಗಿ ಟ್ವಿಸ್ಟ್ ಸಿಕ್ಕಿದೆ.
ಸುಜಾತಾ ಹಂಡಿ ಅವರ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ಮತ್ತು ಹಲ್ಲೆ ಆರೋಪಗಳು ಸೇರಿವೆ. ವಿಶೇಷವಾಗಿ ಧಾರವಾಡದ ತುಕಾರಾಮ್ ಎಂಬ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿ 1.84 ಲಕ್ಷ ರೂಪಾಯಿ ವಸೂಲಿ ಮಾಡಲು ಪ್ರಯತ್ನಿಸಿದ್ದಾರೆಂದು ಆರೋಪವಿದೆ. ಈ ಸಂದರ್ಭದಲ್ಲಿ ತುಕಾರಾಮ್ ಅವರನ್ನು ಕೂಡಿ ಹಾಕಿ ನಾಲ್ಕೈದು ಯುವಕರೊಂದಿಗೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಾಗಿತ್ತು. ಹುಬ್ಬಳ್ಳಿ ಹೊರವಲಯದ ಜಯಾ ಫ್ಲಾಟ್ ಬಳಿ ಇರುವ ಶೆಡ್‌ನಲ್ಲಿ ಈ ಟಾರ್ಚರ್ ನಡೆದಿದ್ದು, ಮಚ್ಚು, ಪ್ಲಾಸ್ಟಿಕ್ ಹಗ್ಗ ಮತ್ತು ಬೆಲ್ಟ್‌ಗಳಿಂದ ಥಳಿಸಿದ್ದಾರೆಂದು ಆರೋಪಿಸಲಾಗಿದೆ.
ಈ ಘಟನೆಯ 3 ವರ್ಷಗಳ ಹಳೇ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸುಜಾತಾ ಹಂಡಿ ಅವರು ಲಾಂಗ್ ಹಿಡಿದು ಬೆದರಿಕೆ ಹಾಕುತ್ತಿರುವುದು ಮತ್ತು ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ. ಈ ಪ್ರಕರಣದಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸುಜಾತಾ ಹಂಡಿ ಮತ್ತು ಸಹಚರರನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದು ಹೊರಬಂದಿದ್ದರು.
ಪ್ರಸ್ತುತ ವಿವಾದ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣಾ ಕಲ್ಲಕುಂಟ್ಲಾ ಅವರ ದೂರಿನ ಮೇಲೆ ಸುಜಾತಾ ಹಂಡಿಯನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ವಿವಸ್ತ್ರಗೊಳಿಸಿದ ಆರೋಪಕ್ಕೆ ಪೊಲೀಸರು ತಳ್ಳಿಹಾಕಿದ್ದು, ಸುಜಾತಾ ಅವರು ಪೊಲೀಸರ ಮೇಲೆ ಹಲ್ಲೆ ಮಾಡಿ ತಾವೇ ಬಟ್ಟೆ ಬಿಚ್ಚಿಕೊಂಡಿದ್ದಾರೆಂದು ಹೇಳಿದ್ದಾರೆ. ಒಟ್ಟಾರೆಯಾಗಿ ಸುಜಾತಾ ಹಂಡಿ ಅವರ ವಿರುದ್ಧ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ರಾಜಕೀಯ ಬಿಸಿ ಸುದ್ದಿಯಾಗಿದ್ದು, ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ ಸುಜಾತಾ ಹಂಡಿಯವರ ಹಳೇ ಕ್ರಿಮಿನಲ್ ಚಟುವಟಿಕೆಗಳು ಬಯಲಾದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ.





