ಬೆಂಗಳೂರು: ಸಿಲಿಕಾನ್ ಸಿಟಿಯ ಜನಬಿಡದ ರಸ್ತೆಗಳಲ್ಲಿ ಒಂದಾದ ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ನಡುವಿನ ಹೊರ ವರ್ತುಲ ರಸ್ತೆಯಲ್ಲಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ‘ಪಂಕ್ಚರ್ ಮಾಫಿಯಾ’ ಮತ್ತೆ ಸಕ್ರಿಯವಾಗಿದ್ದು, ಉದ್ದೇಶಪೂರ್ವಕವಾಗಿ ರಸ್ತೆಯ ಮೇಲೆ ಮೊಳೆಗಳನ್ನು ಚೆಲ್ಲುವ ಮೂಲಕ ಸವಾರರನ್ನು ಸುಲಿಗೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ
ಇತ್ತೀಚೆಗೆ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜಾಗೃತ ಸವಾರರೊಬ್ಬರು ರಸ್ತೆಯ ಮೇಲೆ ಬಿದ್ದಿದ್ದ ಕೈ ಬೊಗಸೆಯಷ್ಟು ಮೊಳೆಗಳನ್ನು ಸಂಗ್ರಹಿಸಿ ಅದರ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ದುಷ್ಕರ್ಮಿಗಳು ವಾಹನಗಳ ಟೈರ್‌ಗಳನ್ನು ಪಂಕ್ಚರ್ ಮಾಡಲು ಮೊಳೆಗಳನ್ನು ಚೆಲ್ಲುತ್ತಿದ್ದಾರೆ. ಇದು ಕೇವಲ ಕಾಕತಾಳೀಯವಲ್ಲ, ಇದೊಂದು ವ್ಯವಸ್ಥಿತ ಜಾಲ ಎಂದು ಪೋಸ್ಟ್ ಮಾಡಲಾಗಿದೆ.
ಎಡಭಾಗದ ರಸ್ತೆ ಬಳಕೆ ತಪ್ಪಿಸಲು ಸಲಹೆ
ರಸ್ತೆಯ ಎಡಭಾಗದಲ್ಲಿ ಅತಿ ಹೆಚ್ಚು ಮೊಳೆಗಳು ಕಂಡುಬಂದಿವೆ. ಸಾಮಾನ್ಯವಾಗಿ ದ್ವಿಚಕ್ರ ವಾಹನ ಸವಾರರು ಮತ್ತು ನಿಧಾನವಾಗಿ ಚಲಿಸುವ ವಾಹನಗಳು ರಸ್ತೆಯ ಎಡಭಾಗವನ್ನೇ ಬಳಸುತ್ತವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು, ಎಡಭಾಗದ ಟ್ರ್ಯಾಕ್‌ನಲ್ಲಿ ಮೊಳೆಗಳನ್ನು ಹರಡುತ್ತಿದ್ದಾರೆ. ಟೈರ್ ಪಂಕ್ಚರ್ ಆದ ಕೂಡಲೇ ಹತ್ತಿರದಲ್ಲೇ ಇರುವ ಪಂಕ್ಚರ್ ಅಂಗಡಿಗಳಿಗೆ ಹೋಗುವಂತೆ ಮಾಡಿ, ಅಲ್ಲಿ ದುಬಾರಿ ಹಣ ವಸೂಲಿ ಮಾಡುವುದು ಈ ಮಾಫಿಯಾದ ಮುಖ್ಯ ಉದ್ದೇಶವಾಗಿದೆ.
ಕೇವಲ ಹಣ ವಸೂಲಿ ಮಾತ್ರವಲ್ಲದೆ, ವೇಗವಾಗಿ ಚಲಿಸುವ ವಾಹನಗಳ ಟೈರ್ ದಿಢೀರ್ ಪಂಕ್ಚರ್ ಆದರೆ ಚಾಲಕರು ನಿಯಂತ್ರಣ ತಪ್ಪಿ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ವರ್ಷಗಳಿಂದ ಈ ರಸ್ತೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಮುನ್ನೆಚ್ಚರಿಕೆ
ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ರಸ್ತೆಯಲ್ಲಿ ಸಂಚರಿಸುವಾಗ ರಸ್ತೆಯ ಎಡ ಅಂಚಿನಲ್ಲಿ ಚಲಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಟೈರ್ ಪಂಕ್ಚರ್ ಆದ ತಕ್ಷಣ ಹತ್ತಿರದಲ್ಲೇ ಇರುವ ಸಣ್ಣಪುಟ್ಟ ತಾತ್ಕಾಲಿಕ ಅಂಗಡಿಗಳ ಬದಲಿಗೆ ಅಧಿಕೃತ ಸರ್ವಿಸ್ ಸೆಂಟರ್‌ಗಳಿಗೆ ಹೋಗಲು ಪ್ರಯತ್ನಿಸಿ. ರಸ್ತೆಯಲ್ಲಿ ಮೊಳೆಗಳು ಅಥವಾ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿ.
ಸಂಚಾರ ಪೊಲೀಸರು ಈ ಭಾಗದಲ್ಲಿ ಸಿಸಿಟಿವಿಗಳನ್ನ ಅಳವಡಿಸಬೇಕು ಇದರಿಂದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.





