ಬೆಂಗಳೂರು: ಬಾಲ್ಯದಲ್ಲಿ ಬೇಸಿಗೆ ಕಾಲದ ಶಾಲಾ ರಜೆ ಬಂದರೆ ಮಕ್ಕಳು ಎಷ್ಟು ಸಂತೋಷಪಡುತ್ತಿದ್ದರೋ, ಅದೇ ರೀತಿ ಈಗ ಒಂದು ಕಂಪನಿ ವಿಂಟರ್ ರಜೆ ನೀಡಿದೆ ಎಂದು ಕಂಪನಿಯ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿ ಖುಷಿ ಹಂಚಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಹೌದು ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ಉದ್ಯೋಗಿಗಳು ಚಳಿಗಾಲದಲ್ಲಿ ‘ವಿಂಟರ್ ಬ್ರೇಕ್’ ಪಡೆದಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಫ್ಲಿಪ್‌ಕಾರ್ಟ್‌ನ ಸಹಾಯಕ ಬ್ರಾಂಡ್ ಮ್ಯಾನೇಜರ್ (ಮಾರ್ಕೆಟಿಂಗ್) ಸಿಮ್ರಾನ್ ಎಂ ಭಂಬಾನಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಡಿಸೆಂಬರ್ ಮಧ್ಯದಿಂದ ವರ್ಷಾಂತ್ಯದವರೆಗೆ ಕಂಪನಿಯಲ್ಲಿ ‘ಕಡಿಮೆ-ಕೀ ಚಳಿಗಾಲದ ವಿರಾಮ’ ಇರುತ್ತದೆ ಎಂದು ಸಿಮ್ರಾನ್ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.
ಸಿಮ್ರಾನ್ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಂತು ವಿಡಿಯೋ ಮಾಡಿದ್ದಾರೆ. ಚಳಿಗಾಲದ ರಜೆ ಆರಂಭವಾಗುವ ಮುನ್ನವೇ ಊರಿಗೆ ಹೊರಟಿದ್ದಾರೆ. ಡಿಸೆಂಬರ್ 20ರ ನಂತರ ನಮ್ಮ ಕಂಪನಿಯಲ್ಲಿ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುತ್ತಾರೆ ಅಥವಾ ಉಳಿದ ವಾರ್ಷಿಕ ರಜೆಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ನಾನು ರಜೆ ತೆಗೆದುಕೊಂಡು ಮನೆಗೆ ಹೋಗುತ್ತಿದ್ದೇನೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ವಿಮಾನ ಟಿಕೆಟ್ ದರ ಹೆಚ್ಚಾಗುವ ಮುನ್ನವೇ ಪ್ರಯಾಣ ಮಾಡುತ್ತಿದ್ದೇನೆ ಎಂದೂ ತಿಳಿಸಿದ್ದಾರೆ.
ಈ ವಿಡಿಯೋದಲ್ಲಿ ಸಿಮ್ರಾನ್ ಅವರು ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದು ನನಗೆ ಶಾಲಾ ದಿನಗಳನ್ನು ನೆನಪಿಸುತ್ತದೆ. ಚಿಕ್ಕಂದಿನಲ್ಲಿ ಬೇಸಿಗೆ ರಜೆ ಬಂದರೆ ಎಷ್ಟು ಸಂತೋಷವೋ, ಅದೇ ರೀತಿ ಈಗ ನಮಗೆ ಚಳಿಗಾಲದ ರಜೆ ಸಿಗುತ್ತದೆ ಎಂದು ನಗುಮೊಗದಲ್ಲಿ ಹೇಳಿದ್ದಾರೆ. ಆದರೆ ಇದು ಪೂರ್ತಿ ರಜೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಳಿ ರಜೆ ಎಂದರೆ ಕೆಲಸ ಇಲ್ಲ ಎಂದಲ್ಲ, ಬದಲಿಗೆ ನಾವು ಮನೆಯಿಂದ ಕೆಲಸ ಮಾಡುತ್ತೇವೆ ಅಥವಾ ರಜೆ ತೆಗೆದುಕೊಳ್ಳುತ್ತೇವೆ. ಮುಂದಿನ ವರ್ಷವೇ ಕಚೇರಿಗೆ ಬರುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪನಿಗಳಲ್ಲಿ ವರ್ಷಾಂತ್ಯದಲ್ಲಿ ಹಾಜರಾತಿ ಕಡಿಮೆಯಾಗುವುದು ಸಾಮಾನ್ಯ. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್, ಹೊಸ ವರ್ಷಾಚರಣೆಗಳು, ಚಳಿಗಾಲದ ಕಾರಣದಿಂದ ಉದ್ಯೋಗಿಗಳು ಮನೆಯಲ್ಲಿ ಸಮಯ ಕಳೆಯಲು ಬಯಸುತ್ತಾರೆ. ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯಿಂದಾಗಿ ಇದು ಸಾಧ್ಯವಾಗುತ್ತದೆ. ಅನೇಕ ಕಂಪನಿಗಳು ಈ ಅವಧಿಯಲ್ಲಿ ಉದ್ಯೋಗಿಗಳಿಗೆ ಹೆಚ್ಚುವರಿ ರಜೆಗಳನ್ನು ಪ್ರೋತ್ಸಾಹಿಸುತ್ತವೆ. ಇದರಿಂದ ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.





