ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಇತ್ತೀಚೆಗೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ವೇದಿಕೆಯಲ್ಲಿ ‘ಕಾಂತಾರ-1’ ಚಿತ್ರದ ದೈವದ ನರ್ತನವನ್ನು ಅನುಕರಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆ ನಡೆದು ಹಲವು ವಾರಗಳ ನಂತರ ಕಾಂತಾರ 1 ಸಿನಿಮಾದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕೊನೆಗೂ ಮೌನ ಮುರಿದಿದ್ದಾರೆ. ರಣವೀರ್ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಇಂತಹ ವರ್ತನೆಗಳು ತಮಗೆ ‘ಅಹಿತಕರ’ ಅನುಭವ ನೀಡುತ್ತವೆ ಎಂದು ರಿಷಬ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ರಿಷಬ್ ಶೆಟ್ಟಿ, ದೈವಗಳು ಮತ್ತು ನಮ್ಮ ಆಚರಣೆಗಳು ಅತ್ಯಂತ ಪವಿತ್ರವಾದವು. ಯಾರಾದರೂ ಸರಿಯಾದ ಮಾರ್ಗದರ್ಶನವಿಲ್ಲದೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಕರಿಸಲು ಪ್ರಯತ್ನಿಸಿದಾಗ ಅದು ಅಹಿತಕರವೆನಿಸುತ್ತದೆ. ಸಿನಿಮಾದಲ್ಲಿರುವ ಕಲೆ ಬೇರೆ, ಆದರೆ ದೈವಕ್ಕೆ ಸಂಬಂಧಿಸಿದ ಭಾಗವು ನಂಬಿಕೆಯ ಮತ್ತು ಭಾವನಾತ್ಮಕ ವಿಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿನಿಮಾದ ಹೆಚ್ಚಿನ ಭಾಗವು ಕೇವಲ ನಟನೆ ಮತ್ತು ಪ್ರದರ್ಶನವಾಗಿರಬಹುದು. ಆದರೆ, ‘ಕಾಂತಾರ 1’ ಚಿತ್ರದಲ್ಲಿ ತೋರಿಸಲಾದ ದೈವಾರಾಧನೆಯ ಭಾಗವು ಕರಾವಳಿ ಜನರ ಶ್ರದ್ಧೆ ಮತ್ತು ಭಕ್ತಿಯ ಸಂಕೇತವಾಗಿದೆ. ನಾನು ಹೋದ ಕಡೆಯಲ್ಲೆಲ್ಲಾ ಜನರಿಗೆ ಒಂದು ವಿನಂತಿಯನ್ನು ಮಾಡುತ್ತೇನೆ. ದೈವದ ಆಚರಣೆಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಡಿ ಅಥವಾ ಅದನ್ನು ಅಪಹಾಸ್ಯ ಮಾಡಬೇಡಿ. ಇದು ನಮಗೆ ಕೇವಲ ಒಂದು ಪಾತ್ರವಲ್ಲ, ಇದು ನಮ್ಮ ಜೀವನಾಡಿಯಂತೆ ಆಳವಾಗಿ ಸಂಪರ್ಕ ಹೊಂದಿದೆ ಪರೊಕ್ಷವಾಗಿ ರಣವೀರ್ ವರ್ತನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ವಾರಗಳ ಹಿಂದೆ ಗೋವಾದಲ್ಲಿ ನಡೆದ ಐಎಫ್‌ಎಫ್‌ಐ ಸಮಾರಂಭದಲ್ಲಿ, ವೇದಿಕೆಯ ಮೇಲೆ ರಿಷಬ್ ಶೆಟ್ಟಿ ಮುಂಭಾಗದಲ್ಲೇ ರಣವೀರ್ ಸಿಂಗ್ ಅವರು ಕಾಂತಾರ ಚಿತ್ರದ ಕೋಲದ ನರ್ತನ ಮತ್ತು ದೈವದ ಕೂಗನ್ನು ಅಣಕಿಸುವಂತೆ ಅನುಕರಿಸಿದ್ದರು.ಜೊತೆಗೆ ಕರಾವಳಿ ದೈವವನ್ನ ಫೀಮೆಲ್ ಗೋಸ್ಟ್ ಎಂದು ಕರೆದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕರಾವಳಿ ಭಾಗದ ಜನರು ಮತ್ತು ದೈವಾರಾಧಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.
ಸದ್ಯ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಪ್ರದಾಯ ಮತ್ತು ಧರ್ಮದ ವಿಚಾರದಲ್ಲಿ ಅತ್ಯಂತ ಶಿಸ್ತು ಪಾಲಿಸುವ ರಿಷಬ್, ತಮ್ಮ ಮುಂದಿನ ಚಿತ್ರದಲ್ಲೂ ಗೌರವದಿಂದ ದೈವಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.





