ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣವು ದಿನೇ ದಿನೇ ವಿಷಕಾರಿಯಾಗಿದ್ದು, ಪರಿಸ್ಥಿತಿ ‘ಗ್ಯಾಸ್ ಚೇಂಬರ್’ನಂತಾಗಿದೆ. ದೆಹಲಿಯಲ್ಲಿನ ಭೀಕರ ವಾಯು ಮಾಲಿನ್ಯ ಮತ್ತು ದಟ್ಟ ಮಂಜು ಜನಸಾಮಾನ್ಯರು, ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.
ದೆಹಲಿ ಸರ್ಕಾರವು ವಾಯು ಗುಣಮಟ್ಟದ ಕುಸಿತದ ಕಾರಣದಿಂದಾಗಿ, ಎಲ್ಲಾ ಶಾಲೆಗಳಲ್ಲಿ ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆನ್‌ಲೈನ್ ತರಗತಿಗಳನ್ನು ನಡೆಸಲು ಸೂಚನೆ ನೀಡಿದೆ.ಈ ಹಿಂದೆ, ದೆಹಲಿ ಸರ್ಕಾರವು ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅಥವಾ ಆನ್‌ಲೈನ್ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಲು ಎರಡು ಆಯ್ಕೆಗಳನ್ನು ನೀಡಿತ್ತು. ಆದರೆ, ಇಂದು ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) 500ಕ್ಕೆ ತಲುಪಿದ ಕಾರಣ, ಸರ್ಕಾರವು ಈ ಆಯ್ಕೆಗಳನ್ನು ಹಿಂಪಡೆದಿದೆ.
ಶಿಕ್ಷಣ ಇಲಾಖೆಯು ಈ ಸಂಬಂಧ ಇಂದು ಸಂಜೆಯೇ ಸುತ್ತೋಲೆ ಹೊರಡಿಸಿದ್ದು, ದೆಹಲಿಯ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಮತ್ತು ಖಾಸಗಿ ಶಾಲೆಗಳು 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಕಡ್ಡಾಯವಾಗಿ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ಎಲ್ಲಾ ಶಾಲಾ ಮುಖ್ಯಸ್ಥರು ಈ ಆದೇಶವನ್ನು ಕೂಡಲೇ ಜಾರಿಗೊಳಿಸಲು ಮತ್ತು ಪೋಷಕರ ಗಮನಕ್ಕೆ ತರಲು ನಿರ್ದೇಶಿಸಲಾಗಿದೆ.
ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 500ಕ್ಕೆ ತಲುಪಿದೆ. 401 ರಿಂದ 500 ರವರೆಗಿನ AQI ಅನ್ನು ತೀವ್ರ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇಷ್ಟು ಪ್ರಮಾಣದ ಮಾಲಿನ್ಯವು ಆರೋಗ್ಯವಂತ ವ್ಯಕ್ತಿಗಳ ಮೇಲೂ ತೀವ್ರ ಪರಿಣಾಮ ಬೀರುತ್ತದೆ.
ದಟ್ಟ ಮಂಜು ಮತ್ತು ಮಾಲಿನ್ಯದಿಂದಾಗಿ ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ:
-
ವಾಯು ಮತ್ತು ರೈಲು ಸಂಚಾರ ಅಸ್ತವ್ಯಸ್ತ: ಹವಾಮಾನ ವೈಪರೀತ್ಯದಿಂದಾಗಿ ಇಂದು ಸುಮಾರು 66 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ನಾನಾ ಭಾಗಗಳಿಗೆ ಹೊರಡಬೇಕಿದ್ದ 60 ರೈಲುಗಳನ್ನು ರದ್ದುಗೊಳಿಸಲಾಗಿದೆ.
-
ಪ್ರಧಾನಿ ಮೋದಿ ಪ್ರವಾಸ ವಿಳಂಬ: ಜೋರ್ಡಾನ್, ಇಥಿಯೋಪಿಯಾ, ಒಮಾನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೂ ವಾಯು ಮಾಲಿನ್ಯ ಮತ್ತು ದಟ್ಟ ಮಂಜು ಅಡ್ಡಿಪಡಿಸಿದೆ. ಬೆಳಗ್ಗೆ 8:30ಕ್ಕೆ ತೆರಳಬೇಕಿದ್ದ ವಿಮಾನವು ಸ್ವಲ್ಪ ಸಮಯ ತಡವಾಗಿ ಟೇಕಾಫ್ ಆಗಿದೆ.
-
ಸುಪ್ರೀಂ ಕೋರ್ಟ್ ಕಲಾಪಕ್ಕೆ ಅಡ್ಡಿ: ದೆಹಲಿಯ ದಟ್ಟ ಮಂಜು ಸುಪ್ರೀಂ ಕೋರ್ಟ್ ಕಲಾಪಗಳಿಗೂ ತಟ್ಟಿದೆ. ನ್ಯಾಯಾಧೀಶರು ವಕೀಲರು ಹಾಗೂ ಅರ್ಜಿದಾರರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸಲಹೆ ನೀಡಿದ್ದಾರೆ.
ದಟ್ಟ ಮಂಜು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮೇಲೂ ಭೀಕರ ಪರಿಣಾಮ ಬೀರಿದೆ. ಬೆಳಗ್ಗೆ ದಟ್ಟ ಮಂಜು ಆವರಿಸಿದ್ದ ಕಾರಣ, ರಾನಿಯಾಲ ಗ್ರಾಮದ ಬಳಿ ಸರಣಿ ಅಪಘಾತಗಳು ಸಂಭವಿಸಿವೆ. ಸುಮಾರು 20 ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿದ್ದು, ಈ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವು ವಾಹನಗಳು ಜಖಂಗೊಂಡಿವೆ. ಈ ವಾಯುಮಾಲೀನ್ಯ ಇರೊಂ ಸಲುವಾಗಿ ಮಕ್ಕಳ ಆರೋಗ್ಯದ ಮೇಲೆ ಬೀರಬಾರದು ಎಂಬ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.





