2025ರಲ್ಲಿ ಚಿನ್ನದ ಬೆಲೆ ಸುಮಾರು 53% ರಷ್ಟು ಗಗನಕ್ಕೇರಿ ಎಲ್ಲರನ್ನೂ ಬೆಚ್ಚಿ ಬಿಟ್ಟಿತ್ತು. ಈಗ 2026 ಹತ್ತಿರ ಬಂದಿದ್ದು, ಮದುವೆ-ಮನೆಕೆಲಸಕ್ಕೆ ಚಿನ್ನ ಖರೀದಿಸಬೇಕಾದ ಕುಟುಂಬಗಳು, ಹೂಡಿಕೆದಾರರು ಎಲ್ಲರ ಕಣ್ಣು ವಿಶ್ವ ಚಿನ್ನ ಮಂಡಳಿ (World Gold Council – WGC) ವರದಿಯ ಮೇಲಿದೆ. ಆ ವರದಿ ಏನು ಹೇಳುತ್ತಿದೆ ಗೊತ್ತಾ?
2026ರಲ್ಲಿ ಚಿನ್ನದ ಬೆಲೆ 15-30% ಏರಿಕೆಯಾಗಬಹುದು! ಹೌದು, ನೀವು ಸರಿಯಾಗಿ ಓದಿದ್ದೀರಿ. ವಿಶ್ವ ಚಿನ್ನ ಮಂಡಳಿಯ ಇತ್ತೀಚಿನ ವರದಿ ಪ್ರಕಾರ ಮುಂದಿನ ವರ್ಷ ಚಿನ್ನದ ಬೆಲೆ ಇನ್ನೂ 15 ರಿಂದ 30% ತನಕ ಏರಬಹುದು ಎಂದು ಶಾಕಿಂಗ್ ಮುನ್ಸೂಚನೆ ನೀಡಿದೆ. ಅಂದರೆ, ಇಂದು 1 ಲಕ್ಷ ರೂ.ಗೆ ಬರುವ 10 ಗ್ರಾಂ ಚಿನ್ನ 2026ಕ್ಕೆ 1.15 ರಿಂದ 1.30 ಲಕ್ಷ ರೂ. ತನಕ ತಲುಪಬಹುದು.
ಚಿನ್ನದ ಬೆಲೆ ಏರುವ 3 ಮುಖ್ಯ ಕಾರಣಗಳು
- ವಿಶ್ವ ಆರ್ಥಿಕ ಅನಿಶ್ಚಿತತೆ: ಅಮೆರಿಕ-ಚೀನಾ ವ್ಯಾಪಾರ ಯುದ್ಧ, ಯುರೋಪ್‌ನ ರಾಜಕೀಯ ಅಸ್ಥಿರತೆ, ಮಧ್ಯಪ್ರಾಚ್ಯ ಉದ್ವಿಗ್ನತೆ ಇವೆಲ್ಲವೂ ಚಿನ್ನಕ್ಕೆ “ಸುರಕ್ಷಿತ ಹೂಡಿಕೆ” ಎಂಬ ಗುರುತು ಇನ್ನಷ್ಟು ಬಲಪಡಿಸುತ್ತವೆ.
- ಕೇಂದ್ರೀಯ ಬ್ಯಾಂಕ್‌ಗಳ ಚಿನ್ನ ಖರೀದಿ: ಚೀನಾ, ರಷ್ಯಾ, ಭಾರತ ಸೇರಿದಂತೆ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ದಾಖಲೆ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿವೆ. 2025ರಲ್ಲೇ 1000 ಟನ್‌ಗಿಂತ ಹೆಚ್ಚು ಖರೀದಿ ನಡೆದಿದೆ.
- ಹಣದುಬ್ಬರ ಮತ್ತು ಡಾಲರ್ ದುರ್ಬಲ: ಡಾಲರ್ ದುರ್ಬಲವಾದಾಗ ಚಿನ್ನದ ಬೆಲೆ ಗಗನಕ್ಕೇರುತ್ತದೆ. 2026ರಲ್ಲಿ ಅಮೆರಿಕದಲ್ಲಿ ಬಡ್ಡಿದರ ಇಳಿಕೆ ಸಾಧ್ಯತೆ ಇದೆ.
ಆದರೆ ಬೆಲೆ ಇಳಿಯುವ ಸಾಧ್ಯತೆಯೂ ಇದೆ:
ವಿಶ್ವ ಚಿನ್ನ ಮಂಡಳಿಯೇ ಒಂದು ಪರ್ಯಾಯ ಸನ್ನಿವೇಶವನ್ನೂ ಎತ್ತಿ ಹಿಡಿದಿದೆ.
- ಅಮೆರಿಕ ಆರ್ಥಿಕತೆ ಬಲಗೊಂಡರೆ
- ಬಡ್ಡಿದರ ಏರಿಕೆಯಾದರೆ
- ಷೇರು ಮಾರುಕಟ್ಟೆ ಸ್ಥಿರವಾದರೆ ಅಂತಹ ಸಂದರ್ಭದಲ್ಲಿ ಚಿನ್ನದ ಬೆಲೆ 5 ರಿಂದ 20% ಇಳಿಯಬಹುದು ಎಂದು ತಿಳಿಸಿದೆ.
ಭಾರತೀಯರಿಗೆ ಇದರ ಅರ್ಥ ಏನು?
- ಮದುವೆಗೆ ಚಿನ್ನ ಖರೀದಿಸಬೇಕಾದವರು ಈಗಲೇ ಖರೀದಿಸಿದರೆ ಲಾಭ!
- ಉಳಿತಾಯಕ್ಕಾಗಿ ಚಿನ್ನ ಹೂಡಿಕೆ ಮಾಡುವವರು 2026ರ ಏರಿಕೆಗೆ ಕಾಯಬಹುದು.
- ಈಗಾಗಲೇ ಚಿನ್ನ ಹೊಂದಿರುವವರಿಗೆ ಭಾರೀ ಲಾಭದ ಸಾಧ್ಯತೆ.
ವಿಶ್ವ ಚಿನ್ನ ಮಂಡಳಿಯ ಮಾತುಗಳೇನು, “2026ರಲ್ಲಿ ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಹಣದುಬ್ಬರ ಆತಂಕ ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಖರೀದಿ ಇವೆಲ್ಲ ಚಿನ್ನಕ್ಕೆ ಬಲ ನೀಡುತ್ತವೆ. ಆದರೆ ಅಮೆರಿಕ ಆರ್ಥಿಕತೆ ಗಟ್ಟಿಯಾದರೆ ಸಣ್ಣ ತಿದ್ದುಪಡಿ ಬರಬಹುದು.”
ಒಟ್ಟಾರೆ, 2026 ಚಿನ್ನ ಪ್ರಿಯರಿಗೆ ಭಾರೀ ಆದಾಯದ ವರ್ಷವಾಗಬಹುದು ಅಥವಾ ಮದುವೆ ಮನೆಯವರಿಗೆ ಜೇಬಿಗೆ ಕತ್ತರಿ ಹಾಕುವ ವರ್ಷವಾಗಬಹುದು.





