ತಾಂತ್ರಿಕ ದೋಷದ ಕಾರಣದಿಂದ ಆರಂಭವಾದ ಇಂಡಿಗೋ ವಿಮಾನಯಾನ ಸಂಸ್ಥೆಯ ಅವಾಂತರ ಇಂದು ಸತತ 6ನೇ ದಿನಕ್ಕೆ ಕಾಲಿಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ದೇವನಹಳ್ಳಿ) ಬೆಳಗ್ಗೆಯಿಂದಲೇ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಹಲವು ವಿಮಾನಗಳು ರದ್ದುಗೊಂಡಿದ್ದರೆ, ಕೆಲವು ವಿಮಾನಗಳು ಗಂಟಲೆ ಗಂಟಲೆ ವಿಳಂಬದೊಂದಿಗೆ ಹಾರಾಟ ನಡೆಸುತ್ತಿವೆ.
ಇಂದು ರದ್ದಾದ ಪ್ರಮುಖ ವಿಮಾನಗಳು:
- ಬೆಂಗಳೂರು → ದೆಹಲಿ
- ಬೆಂಗಳೂರು → ಕೊಚ್ಚಿ
- ಬೆಂಗಳೂರು → ಮಂಗಳೂರು
- ಬೆಂಗಳೂರು → ಜೋಧಪುರ
ಇನ್ನು ಕೆಲವು ವಿಮಾನಗಳು 2 ರಿಂದ 6 ಗಂಟೆಗಳವರೆಗೆ ವಿಳಂಬದೊಂದಿಗೆ ಹಾರಾಟ ನಡೆಸಿವೆ. ಇಂಡಿಗೋ ಡಿಪಾರ್ಚರ್ ಗೇಟ್‌ಗಳ ಬಳಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಬಂದಿರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಸಿಬ್ಬಂದಿ ನಿರಂತರ ಮಾಹಿತಿ ನೀಡುತ್ತಿದ್ದಾರೆ.
ವಿದೇಶಿ ಪ್ರಯಾಣಿಕರಿಗೂ ಬಿಸಿ ತಟ್ಟಿದೆ:
ಈ ಅವಾಂತರ ವಿದೇಶಿ ಪ್ರವಾಸಿಗರನ್ನೂ ಬಿಟ್ಟಿಲ್ಲ. ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಇಬ್ಬರು ವಿದೇಶಿ ಮಹಿಳೆಯರು ಬೆಂಗಳೂರಿನಿಂದ ಜೋಧಪುರ್‌ಗೆ ಹೋಗಲು ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ವಿಮಾನ ರದ್ದಾದ ಶಾಕ್‌ನಿಂದ ಅವರು ಇಂಡಿಗೋ ಕೌಂಟರ್ ಬಳಿ ಗಂಟಲೆ ಗಂಟಲೆ ನಿಂತು ಪರದಾಟಪಟ್ಟರು.
“ನಾವು ಇಲ್ಲಿಗೆ ರಜೆಗೆ ಬಂದಿದ್ದೇವೆ. ಈಗ ಜೋಧಪುರ್‌ಗೆ ಹೋಗಬೇಕಿತ್ತು. ಆದರೆ ಫ್ಲೈಟ್ ಕ್ಯಾನ್ಸಲ್ ಆಯ್ತು. ಇನ್ನೊಂದು ಟಿಕೆಟ್ ಬುಕ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ, ಆದರೆ ಯಾವುದೂ ದೊರೆಯುತ್ತಿಲ್ಲ” ಎಂದು ನಿರಾಶೆಯಿಂದ ಹೇಳಿದರು.
ಇನ್ನು ಮತ್ತೊಬ್ಬ ವಿದೇಶಿ ಪ್ರಯಾಣಿಕ ಕೂಡೆಗಣ್ಣಿನಲ್ಲಿ ಇಂಡಿಗೋ ಸಿಬ್ಬಂದಿಯೊಂದಿಗೆ ವಾದಿಸುತ್ತಿದ್ದ ದೃಶ್ಯ ಕಂಡುಬಂದಿತು. ಹಲವರು ಮರು ದಿನಕ್ಕೆ ಟಿಕೆಟ್ ಬದಲಾಯಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ಐದು ದಿನಗಳಿಂದ ತೀವ್ರ ಗೊಂದಲ ಅನುಭವಿಸಿದ್ದ ಕೆಂಪೇಗೌಡ ವಿಮಾನ ನಿಲ್ದಾಣ ಇಂದು ಸ್ವಲ್ಪಮಟ್ಟಿಗೆ ಸಹಜ ಸ್ಥಿತಿಯತ್ತ ಚಲಿಸುತ್ತಿದೆ. ಇಂಡಿಗೋ ಕೌಂಟರ್‌ಗಳ ಬಳಿ ದೊಡ್ಡ ಪ್ರಯಾಣಿಕರ ಗುಂಪು ಕಾಣದೇ ಇರುವುದೇ ಇದಕ್ಕೆ ಸಾಕ್ಷಿ. ಆದರೂ ಸಂಪೂರ್ಣ ಸಹಜ ಸ್ಥಿತಿಗೆ ಬರಲು ಇನ್ನೂ 2-3 ದಿನ ಬೇಕಿದೆ ಎನ್ನುತ್ತಾರೆ ವಿಮಾನ ನಿಲ್ದಾಣ ಅಧಿಕಾರಿಗಳು.
ಇಂಡಿಗೋ ಸಂಸ್ಥೆಯು ತಾಂತ್ರಿಕ ಸಮಸ್ಯೆ ಸಂಪೂರ್ಣ ಬಗೆಹರಿದಿದೆ ಎಂದು ಹೇಳಿಕೊಂಡಿದ್ದರೂ, ಪ್ರಯಾಣಿಕರಿಗೆ ಇನ್ನೂ ಕೆಲ ದಿನಗಳ ಕಾಲ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ನಡುವೆ ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಮೊದಲೇ ಪರಿಶೀಲಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬರುವಂತೆ ಸಲಹೆ ನೀಡಲಾಗಿದೆ.





