ಬೆಂಗಳೂರು: ಪತ್ನಿಯ ಕುತ್ತಿಗೆಗೆ ವೈರ್‌ನಿಂದ ಬಿಗಿದು ಕೊಲೆ ಮಾಡಿದ ಬಳಿಕ ಪತಿ ಅದೇ ವೈರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ದಂಪತಿಗಳ ನಡುವಿನ ನಿರಂತರ ಜಗಳ ಈ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.ಈ ಘಟನೆ ಸಂಬಂಧ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು 65 ವರ್ಷ ವಯಸ್ಸಿನ ಬೇಬಿ (ಪತ್ನಿ) ಮತ್ತು 65 ವರ್ಷ ವಯಸ್ಸಿನ ವೆಂಕಟೇಶನ್ (ಪತಿ) ಎಂದು ಗುರುತಿಸಲಾಗಿದೆ. ವೆಂಕಟೇಶನ್ ಅವರು ವೃತ್ತಿಯಲ್ಲಿ ಬಿಎಂಟಿಸಿ (BMTC) ಬಸ್ ಚಾಲಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು. ಪತ್ನಿ ಬೇಬಿ ಅವರಿಗೆ ಅನಾರೋಗ್ಯದ ಸಮಸ್ಯೆಗಳಿದ್ದು, ಪಾರ್ಶ್ವವಾಯು (Stroke) ಪೀಡಿತರಾಗಿದ್ದರಿಂದ ಅವರು ವೀಲ್ ಚೇರ್‌ನಲ್ಲಿಯೇ ಓಡಾಡುತ್ತಿದ್ದರು.
ಪ್ರಾಥಮಿಕ ತನಿಖೆಗಳ ಪ್ರಕಾರ, ವೆಂಕಟೇಶನ್ ಮತ್ತು ಬೇಬಿ ದಂಪತಿಗಳ ನಡುವೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಜಗಳ ನಡೆಯುತ್ತಿತ್ತು. ವಯಸ್ಸಾದ ಕಾರಣದಿಂದ, ಅನಾರೋಗ್ಯದ ಸಮಸ್ಯೆಗಳು, ಮತ್ತು ನಿವೃತ್ತಿಯ ನಂತರದ ಆರ್ಥಿಕ ಸಮಸ್ಯೆ ಮತ್ತು ದೈಹಿಕ ಒತ್ತಡಗಳು ಈ ದಂಪತಿಗಳ ನಡುವೆ ಬಿರುಕು ಮೂಡುಸಿತ್ತು.
ದಿನನಿತ್ಯದ ಸಣ್ಣಪುಟ್ಟ ವಿಷಯಗಳಿಗೆ ಸಹ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಮಕ್ಕಳು ಮನೆಯಿಂದ ಹೊರಗಡೆ ಹೋದಾಗ, ದಂಪತಿಗಳು ತೀವ್ರ ಜಗಳ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನವೂ ದಂಪತಿಗಳ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿದೆ ಎನ್ನಲಾಗಿದೆ. ಜಗಳ ತೀವ್ರವಾದಾಗ, ಕೋಪದ ಭರದಲ್ಲಿ ವೆಂಕಟೇಶನ್ ಅವರು ಮನೆಯಲ್ಲಿದ್ದ ವೈರ್ (Wire) ಒಂದನ್ನು ತೆಗೆದುಕೊಂಡು ಪತ್ನಿ ಬೇಬಿ ಅವರ ಕುತ್ತಿಗೆಗೆ ಬಿಗಿದಿದ್ದಾರೆ. ಪಾರ್ಶ್ವವಾಯು ಪೀಡಿತರಾಗಿದ್ದ ಬೇಬಿ ಎನ್ನನ್ನು ಪ್ರತಿಕ್ರಿಯಿಸಲು ಸಾಧ್ಯವಾಗದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪತ್ನಿಯ ಕೊಲೆಯಾದ ಬಳಿಕ, ಆಘಾತಕ್ಕೊಳಗಾದ ವೆಂಕಟೇಶನ್ ಅವರು ತೀವ್ರ ಮನನೊಂದಿದ್ದಾರೆ. ತಾವು ಮಾಡಿದ ಕೃತ್ಯದ ಅರಿವಾಗಿ, ಅದೇ ವೈರ್ ಅನ್ನು ಬಳಸಿ ತಮ್ಮ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿಗಳ ಸಾವಿನ ಕುರಿತು ಮಾಹಿತಿ ತಿಳಿದ ತಕ್ಷಣವೇ ಸುಬ್ರಮಣ್ಯಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕೊಲೆ ಮತ್ತು ಆತ್ಮಹತ್ಯೆಯಾದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ದಂಪತಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ (Postmortem) ಆಸ್ಪತ್ರೆಗೆ ರವಾನಿಸಿದ್ದಾರೆ.





