ಬೆಂಗಳೂರು: ಬೆಂಗಳೂರಿನಲ್ಲಿ ಇಂದು (19-11-2025) ಮಧ್ಯಾಹ್ನದ ವೇಳೆ ಬೃಹತ್ ದರೋಡೆ ನಡೆದಿದೆ. ಸುಮಾರು ₹7.11 ಕೋಟಿ ನಗದು ಹೊತ್ತೊಯ್ಯುತ್ತಿದ್ದ ಖಾಸಗಿ ಕ್ಯಾಶ್ ವ್ಯಾನ್ ವಾಹನವನ್ನು ದುಷ್ಕರ್ಮಿಗಳ ಗ್ಯಾಂಗ್ ತಡೆದು ನಿಲ್ಲಿಸಿ, ಕೇವಲ ಕೆಲವೇ ನಿಮಿಷಗಳಲ್ಲಿ ಹಣ ದೋಚಿ ಪರಾರಿಯಾಗಿದೆ. ಈ ಘಟನೆ ನಗರದ ಜಯದೇವ ಡೇರಿ ಸರ್ಕಲ್ (ಜೆ.ಪಿ. ನಗರ ಬಳಿ) ಬಳಿಯಲ್ಲಿ ಮಧ್ಯಾಹ್ನ ನಡೆದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಎಟಿಎಂಗಳಿಗೆ ಹಣ ತುಂಬಿಸುವ ಖಾಸಗಿ ಕಂಪನಿಯ ಕ್ಯಾಶ್ ವ್ಯಾನ್‌ನಲ್ಲಿ ಈ ದೊಡ್ಡ ಮೊತ್ತದ ಹಣವಿತ್ತು. ಈ ವಾಹನದಲ್ಲಿ ಇಬ್ಬರು ಕಸ್ಟೋಡಿಯನ್‌ಗಳು ಮತ್ತು ಡ್ರೈವರ್ ಇದ್ದರು. ಹಣವನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಧಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳು ಎರಡು ಇನ್ನೋವಾ ಕ್ರಿಸ್ಟಾ ಕಾರುಗಳಲ್ಲಿ (ಬಿಳಿ ಬಣ್ಣ) ಬಂದಿದ್ದರು. ಒಟ್ಟು 6-7 ಜನ ಸದಸ್ಯರು ಇದ್ದ ಗ್ಯಾಂಗ್ ಸದಸ್ಯರು ಮುಖಕ್ಕೆ ಮಾಸ್ಕ್ ಧರಿಸಿದ್ದರು ಮತ್ತು ಕೈಯಲ್ಲಿ ಕತ್ತಿ, ಚಾಕು ಇತ್ಯಾದಿ ಆಯುಧಗಳನ್ನು ಹಿಡಿದಿದ್ದರು. ಕ್ಯಾಶ್ ವ್ಯಾನ್‌ನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿದ ಅವರು, ಕಸ್ಟೋಡಿಯನ್‌ಗಳನ್ನು ಬೆದರಿಕೆ ಹಾಕಿ ಹಣದ ಚೀಲಗಳನ್ನು ತಮ್ಮ ಕಾರಿಗೆ ವರ್ಗಾಯಿಸಿಕೊಂಡರು. ಇಡೀ ಘಟನೆ ಕೇವಲ 4-5 ನಿಮಿಷಗಳಲ್ಲಿ ಮುಗಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಘಟನೆ ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ತಕ್ಷಣ ದೌಡಾಯಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿಗಳು ಯಾವ ದಿಕ್ಕಿಗೆ ತೆರಳಿದ್ದಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಜಯದೇವ ಆಸ್ಪತ್ರೆ ಸರ್ಕಲ್‌ನ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್‌ನಲ್ಲಿ ಎರಡು ಇನ್ನೋವಾ ಕಾರುಗಳು ವೇಗವಾಗಿ ಹೋಗುತ್ತಿರುವುದು ಸೆರೆಯಾಗಿದೆ.
ಈ ದರೋಡೆಯು ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಅತ್ಯಂತ ದೊಡ್ಡ ಹಗಲು ದರೋಡೆಗಳಲ್ಲಿ ಒಂದಾಗಿದೆ. ಕಳೆದ ಕೆಲವು ತಿಂಗಳುಗಳಿಂದಲೂ ನಗರದಲ್ಲಿ ಕ್ಯಾಶ್ ವ್ಯಾನ್‌ಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೂ ಮುನ್ನ ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವೆಡೆ ಸಣ್ಣ-ಪುಟ್ಟ ಕ್ಯಾಶ್ ದರೋಡೆಗಳು ನಡೆದಿದ್ದವು. ಆದರೆ ₹7 ಕೋಟಿಗೂ ಅಧಿಕ ಮೊತ್ತದ ದರೋಡೆಯಾದರೂ ನಗರ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತರು ಉನ್ನತ ಮಟ್ಟದ ತನಿಖಾ ತಂಡ ರಚಿಸಿದ್ದು, ಡಿಸಿಪಿ ದಕ್ಷಿಣ ವಿಭಾಗ ಮತ್ತು ಸ್ಥಳೀಯ ಎಸಿಪಿ ಮಟ್ಟದ ಅಧಿಕಾರಿಗಳ ನೇತೃತ್ಣದಲ್ಲಿ ತನಿಖೆ ನಡೆಯುತ್ತಿದೆ. ದುಷ್ಕರ್ಮಿಗಳು ರಾಜ್ಯಾದ್ಯಂತ ಅಥವಾ ರಾಜ್ಯದಿಂದ ಹೊರಗೆ ತೆರಳಿರುವ ಸಾಧ್ಯತೆಯಿದ್ದು, ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಅಲರ್ಟ್ ಜಾರಿ ಮಾಡಲಾಗಿದೆ.
ಈ ಘಟನೆಯಿಂದ ಎಟಿಎಂ ಕ್ಯಾಶ್ ಸಾಗಾಣಿಕೆ ಕಂಪನಿಗಳ ಸುರಕ್ಷತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎದ್ದಿದೆ. ಹಗಲುಗುಂಬದಲ್ಲಿ, ಜನಜಂಗುಳಿ ಇರುವ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಇಬ್ಬರು ಕಸ್ಟೋಡಿಯನ್‌ಗಳೊಂದಿಗೆ ಸಾಗಿಸುತ್ತಿದ್ದುದು ಸಾಕಾಗದೇ ಇದ್ದಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಂಕ್‌ಗಳಿಗೆ ಮತ್ತೆ ಸೂಚನೆ ನೀಡುವ ಸಾಧ್ಯತೆ ಇದೆ.
ಪ್ರಸ್ತುತ ತನಿಖೆಯಲ್ಲಿ ದುಷ್ಕರ್ಮಿಗಳು ಮುಂಚಿತವಾಗಿ ಈ ವಾಹನದ ಚಲನವಲನವನ್ನು ಗಮನಿಸಿದ್ದಾರೆ ಎಂಬ ಅನುಮಾನವಿದೆ. ಒಳಗಿನಿಂದ ಮಾಹಿತಿ ಸೋರಿಕೆಯಾದ ಸಾಧ್ಯತೆ ಇದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.





