ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಜನ್ 12ನೇ ಸೀಜನ್ನಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಔಪಚಾರಿಕ ದೂರು ನೀಡಲಾಗಿದೆ. ಸಹ-ಸ್ಪರ್ಧಿ ರಿಷಾ ಗೌಡ ಅವರ ಬಟ್ಟೆಗಳನ್ನು ವಾಷ್ ರೂಂನಲ್ಲಿ ಇಡುವ ಸಂದರ್ಭದಲ್ಲಿ ಅವಹೇಳನಕರವಾಗಿ ನಡೆದುಕೊಂಡ ಆರೋಪ ಮತ್ತು ಮಹಿಳೆಯರ ಬಗ್ಗೆ ಅವಮಾನಕರವಾಗಿ ಮಾತನಾಡಿದ ಆರೋಪವನ್ನು ಈ ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ನಿಂದನೆಗೆ ಗುರಿಯಾಗಿತ್ತು. ಈ ಚರ್ಚೆಯ ಪರಿಣಾಮವಾಗಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಮಹಿಳಾ ಅವಮಾನದ ಆರೋಪದ ಗಂಭೀರತೆಯನ್ನು ಪರಿಗಣಿಸಿ, ಮಹಿಳಾ ಆಯೋಗವು ಈ ವಿಷಯವನ್ನು ಸ್ವತಃ ಪರಿಶೀಲಿಸಲು ನಿರ್ಧರಿಸಿತು.
ರಿಷಾ ಸ್ನಾನಕ್ಕೆ ಹೋಗಿರುತ್ತಾರೆ. ಆ ಸಮಯದಲ್ಲಿ ಗಿಲ್ಲಿ ಬಕೆಟ್ ಕೊಡೋದಿಲ್ವಾ? ಕೊಡದಿದ್ದರೆ ನಿನ್ನ ರೂಮ್‌ನಲ್ಲಿ ಏನು ಮಾಡಬೇಕೋ ಅದನ್ನೇ ಮಾಡ್ತೀನಿ ಎಂದು ತಮಾಷೆಗೆ ಹೇಳುತ್ತಾರೆ. ಆದರೆ ಆ ತಮಾಷೆ ರಿಷಾಗೆ ಇಷ್ಟವಾಗಿಲ್ಲ. ಗಿಲ್ಲಿ ರಿಷಾ ಅವರ ಕೆಲವು ಬಟ್ಟೆಗಳನ್ನು ಶೌಚಾಲಯದ ಬಳಿ ಎಸೆದು ಹಾಕುತ್ತಾರೆ.
ಇದನ್ನು ನೋಡಿದ ರಿಷಾ ತೀವ್ರ ಕೋಪಕ್ಕೆ ಒಳಗಾಗಿ ಗಿಲ್ಲಿ…! ಎಂದು ಜೋರಾಗಿ ಕೂಗುತ್ತಾರೆ. ಬಳಿಕ ಗಿಲ್ಲಿ ಪ್ರಶ್ನಿಸಲು ಬಂದಾಗ ರಿಷಾ ಅವರ ಎಡಗೈಗೆ ಗಟ್ಟಿಯಾಗಿ ಹೊಡೆಯುತ್ತಾರೆ. ಇದರಲ್ಲೂ ನಿಲ್ಲದೆ ಮಲಗುವ ಕೋಣೆಗೆ ಹೋಗಿ ಮತ್ತೊಮ್ಮೆ ಗಿಲ್ಲಿ ಮೇಲೆ ಕೈ ಎತ್ತುತ್ತಾರೆ.
ಇದರ ಜೊತೆಗೆ, ಗಿಲ್ಲಿ ನಟನು ಮಹಿಳೆಯರ ಬಗ್ಗೆ ಸಾಮಾನ್ಯವಾಗಿಯೇ ಅವಮಾನಕರ ಮತ್ತು ಅಪ್ರಾಮಾಣಿಕ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪವೂ ದೂರಿನ ಭಾಗವಾಗಿದೆ. ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ಕೆಲವು ಸಂಭಾಷಣೆಗಳು ಮತ್ತು ವರ್ತನೆಗಳು ಈ ಆರೋಪಗಳಿಗೆ ಆಧಾರವಾಗಿವೆ.
ದೂರು ಸ್ವೀಕೃತವಾದ ನಂತರ, ಕರ್ನಾಟಕ ರಾಜ್ಯ ಮಹಿಳಾ ಆಯೋಗವು ತನಿಖೆಯನ್ನು ಪ್ರಾರಂಭಿಸಿದೆ. ತನಿಖೆಯ ಭಾಗವಾಗಿ, ಆಯೋಗವು ಬಿಗ್ ಬಾಸ್ ಕನ್ನಡದ ಅನುಗುಣವಾದ ಎಪಿಸೋಡ್‌ಗಳ ವೀಡಿಯೊ ಫುಟೇಜ್‌ಗಳನ್ನು ಪಡೆದುಕೊಂಡು, ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ. ಫುಟೇಜ್‌ಗಳಲ್ಲಿ ದೂರಿನಲ್ಲಿ ಉಲ್ಲೇಖಿಸಲಾದ ಘಟನೆಗಳ ದೃಶ್ಯಾವಳಿಗಳು ಇದ್ದವು.
ಆದರೆ, ಪ್ರಕಟವಾದ ಮಾಹಿತಿಯ ಪ್ರಕಾರ, ಆಯೋಗದ ಪ್ರಾಥಮಿಕ ಪರಿಶೀಲನೆಯಲ್ಲಿ, ಗಿಲ್ಲಿ ನಟನು ಮಹಿಳೆಯರ ಬಗ್ಗೆ ತಪ್ಪಾದ ರೀತಿಯಲ್ಲಿ ನಡೆದುಕೊಂಡ ಬಗ್ಗೆ ಸ್ಪಷ್ಟ ಮತ್ತು ನೇರ ಸಾಕ್ಷ್ಯ ಸಿಗದ ಕಾರಣ, ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ. ಲೀಗಲ್ ಟೀಮ್ ವೀಡಿಯೊ ಸಾಕ್ಷ್ಯ, ದೂರಿನ ವಿವರಗಳು ಮತ್ತು ಸಂಬಂಧಿತ ಕಾನೂನು ಪದ್ಧತಿಗಳನ್ನು ಪರಿಶೀಲಿಸಿ, ಈ ಪ್ರಕರಣದಲ್ಲಿ ಮುಂದುವರೆಯಲು ಸಾಕಷ್ಟು ಆಧಾರಗಳಿವೆಯೇ ಎಂದು ನಿರ್ಧರಿಸಲಿದೆ.





