ಬೆಂಗಳೂರು, ಅಕ್ಟೋಬರ್ 30, 2025: ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಅಕ್ಟೋಬರ್ 29) ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ನಲ್ಲಿ ಪೋಸ್ಟ್ ಮಾಡಿ, ದೇಶದ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ತಕ್ಷಣ ಪ್ರಾರಂಭಿಸಲು ಯುದ್ಧ ಇಲಾಖೆಗೆ (ಪೆಂಟಗಾನ್) ನಿರ್ದೇಶ ನೀಡಿದ್ದಾರೆ.
ಇದು ರಷ್ಯಾ ಮತ್ತು ಚೀನಾ ನಡೆಸಿದ ಇತ್ತೀಚಿನ ಪರಮಾಣು ಸಾಮರ್ಥ್ಯ ಶಸ್ತ್ರಾಸ್ತ್ರಗಳ ಪರೀಕ್ಷೆಗಳಿಗೆ ನೇರ ಪ್ರತಿಕ್ರಿಯೆಯಾಗಿದೆ. ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುವ ಕೆಲವೇ ನಿಮಿಷಗಳ ಮೊದಲು ದಕ್ಷಿಣ ಕೊರಿಯಾದ ಬ್ಯೂಸಾನ್‌ನಲ್ಲಿ ಟ್ರಂಪ್ ಈ ಘೋಷಣೆ ಮಾಡಿದರು.
ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಅಮೆರಿಕಾ ಯಾವುದೇ ಇತರ ದೇಶಗಳಿಗಿಂತಲೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ನನ್ನ ಮೊದಲ ಅವಧಿಯಲ್ಲಿ ಪೂರ್ಣ ನವೀಕರಣ ಮೂಲಕ ಇದನ್ನು ಸಾಧಿಸಿದ್ದೇವೆ. ರಷ್ಯಾ ಎರಡನೇ ಸ್ಥಾನದಲ್ಲಿದ್ದು, ಚೀನಾ ದೂರದ ಮೂರನೇ ಸ್ಥಾನದಲ್ಲಿದೆ, ಆದರೆ 5 ವರ್ಷಗಳೊಳಗೆ ಸಮಾನಗೊಳ್ಳುತ್ತದೆ ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇತರ ದೇಶಗಳ ಪರೀಕ್ಷಾ ಕಾರ್ಯಕ್ರಮಗಳ ಕಾರಣದಿಂದ, ನಾನು ಯುದ್ಧ ಇಲಾಖೆಗೆ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಸಮಾನ ಆಧಾರದಲ್ಲಿ ಪರೀಕ್ಷಿಸಲು ಸೂಚನೆ ನೀಡಿದ್ದೇನೆ. ಆ ಪ್ರಕ್ರಿಯೆ ತಕ್ಷಣ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ 9M730 ಬೂರೆವೆಸ್ಟ್ನಿಕ್ (Burevestnik) ಕ್ರೂಸ್ ಕ್ಷೇಪಣಿ ಮತ್ತು ಪೊಸಿಡಾನ್ (Poseidon) ನೀರಿಗೆ ಡ್ರೋನ್ ಅನ್ನು ರಷ್ಯಾ ಪರೀಕ್ಷಿಸಿದೆ. ಇವು ದೀರ್ಘ ದೂರ ಪ್ರಯಾಣಿಸಿ, ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು “ಯಶಸ್ವಿ” ಎಂದು ಘೋಷಿಸಿದ್ದಾರೆ.
ಚೀನಾ ತನ್ನ ಪರಮಾಣು ಶಸ್ತ್ರಸ್ತ್ರಗಳ ಸಂಖ್ಯೆಯನ್ನು 600ಕ್ಕಿಂತ ಹೆಚ್ಚುಗೆ ಹೆಚ್ಚಿಸಿದ್ದು, 2030ರೊಳಗೆ 1000 ತಲುಪುವ ನಿರೀಕ್ಷೆ.
ಅಮೆರಿಕಾ 1992ರಿಂದ ಪರಮಾಣು ಸ್ಫೋಟ ಪರೀಕ್ಷೆಗಳನ್ನು ನಿಲ್ಲಿಸಿತ್ತು (CTBT ಸಂಧಿಯನ್ನು ಅನುಸರಿಸಿ). ಈಗ ಇದು 33 ವರ್ಷಗಳ ನಂತರ ಮೊದಲ ಪರೀಕ್ಷೆಗೆ ತಯಾರಿ.
ಡೆಮಾಕ್ರ್ಯಾಟ್ ನೆವಾಡಾ ಕಾಂಗ್ರೆಸ್ ಸದಸ್ಯರು ಇದು ಅನಗತ್ಯ, ನಮ್ಮ ಶಸ್ತ್ರಸ್ತ್ರಗಳು ಈಗಾಗಲೇ ಸುರಕ್ಷಿತವಾಗಿವೆ ಎಂದು ಟ್ರಂಪ್ ನಿಲುವನ್ನ ಖಂಡಿಸಿದ್ದಾರೆ.





