ದೀಪಾವಳಿ ಹಬ್ಬಕ್ಕೂ ಮುಂಚೆಯೇ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಚೀನಾದಿಂದ ಅಕ್ರಮವಾಗಿ ಆಮದು ಆಗುತ್ತಿದ್ದ ಪಟಾಕಿಗಳ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಿದೆ. ಆಪರೇಷನ್ ಫೈರ್ ಟ್ರಯಲ್ ಎಂಬ ಕೋಡ್ ಹೆಸರಿನ, ಕಾರ್ಯಾಚರಣೆಯಲ್ಲಿ ಡಿಆರ್‌ಐಯ ಮುಂಬೈ ವಲಯದ ಅಧಿಕಾರಿಗಳು 4.82 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ಡಿಆರ್‌ಐ ಅಧಿಕಾರಿಗಳು ನವಾ ಶೇವಾ ಬಂದರಿನಲ್ಲಿ 40 ಅಡಿ ಉದ್ದದ ಕಂಟೇನರ್ ಅನ್ನು ತಡೆಹಿಡಿಯಲಾಗಿದೆ. ಈ ಕಂಟೇನರ್ ಚೀನಾದಿಂದ ಬಂದಿದ್ದು, ಗುಜರಾತ್‌ನ ಅಂಕಲೇಶ್ವರದಲ್ಲಿರುವ ಇನ್‌ಲ್ಯಾಂಡ್ ಕಂಟೇನರ್ ಡಿಪೋಗೆ (ಐಸಿಡಿ) ತಲುಪಬೇಕಿತ್ತು. ಕಂಟೇನರ್‌ನ ಸಂಪೂರ್ಣ ತಪಾಸಣೆ ನಡೆಸಿದ ಅಧಿಕಾರಿಗಳು ಅದರೊಳಗೆ 46,640 ಪಟಾಕಿ ಪೆಟ್ಟಿಗೆಗಳನ್ನು ಪತ್ತೆ ಹಚ್ಚಿದ್ದಾರೆ.
ಇದೇ ರೀತಿಯ ಅಕ್ರಮ ಪಟಾಕಿ ಸಾಗಣೆಗಳಿಂದ ದೇಶದಲ್ಲಿ, ವಿದೇಶಿ ವ್ಯಾಪಾರ ನೀತಿಯ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಭಾರತದಲ್ಲಿ ಪಟಾಕಿ ಆಮದು ಮಾಡಿಕೊಳ್ಳಲು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಮತ್ತು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಎರಡರಿಂದಲೂ ಪೂರ್ವಾನುಮೋದನೆಗಳು ಮತ್ತು ಮಾನ್ಯ ಪರವಾನಗಿಗಳು ಅಗತ್ಯವಿರುತ್ತದೆ. 2008 ರ ಸ್ಫೋಟಕ ನಿಯಮಗಳ ಪ್ರಕಾರ ಈ ನಿರ್ಬಂಧವನ್ನು ವಿಧಿಸಲಾಗಿದೆ.
ಪಟಾಕಿಗಳ ಅಕ್ರಮ ಆಮದು ವ್ಯಾಪಾರ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದಲ್ಲದೆ, ಸ್ಫೋಟಗಳು, ಬೆಂಕಿ ಮತ್ತು ಪರಿಸರ ಅಪಾಯಗಳು ಸೇರಿದಂತೆ ಗಂಭೀರ ಅಪಾಯಗಳನ್ನು ಉಂಟುಮಾಡುತ್ತದೆ ಎಂದು ಅಧಿಕಾರಿಗಳು ನಿರಂತರವಾಗಿ ಎಚ್ಚರಿಸಿದ್ದಾರೆ. ಇಂತಹ ಕಳ್ಳಸಾಗಣೆ ಬಂದರು ಕಾರ್ಮಿಕರು, ಹಡಗು ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ಕಾರ್ಯಾಚರಣೆಯ ಮೂಲಕ ಡಿಆರ್‌ಐ ದೇಶದ ಸುರಕ್ಷತೆಗೆ ಉಂಟಾಗಬಹುದಾದ ಅಪಾಯವನ್ನು ತಡೆಗಟ್ಟಿದೆ.





