ಬೆಂಗಳೂರು, ಅಕ್ಟೋಬರ್ 13, 2025: ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಈ ಕ್ರಮಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವ ಖರ್ಗೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸಲು ಸಂವಿಧಾನವೇ ನಮಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ನೀಡುತ್ತದೆ.
ಆರ್ಎಸ್ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ದಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ, ಬಾಬಾ ಸಾಹೇಬ್… pic.twitter.com/b1Gn63uoEq
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 12, 2025
ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ನ ಮೂಲಭೂತವಾದಿ ಸಿದ್ಧಾಂತಗಳು ಸಂವಿಧಾನದ ಆಶಯಗಳಾದ ಏಕತೆ, ಸಮಾನತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತವೆ ಎಂದು ಆರೋಪಿಸಿದ್ದಾರೆ. ಸಂವಿಧಾನವು ವಿಭಜಕ ಶಕ್ತಿಗಳನ್ನು ನಿಗ್ರಹಿಸಲು ನಮಗೆ ಶಕ್ತಿ ಮತ್ತು ಅಧಿಕಾರ ನೀಡುತ್ತದೆ. ಆರ್‌ಎಸ್‌ಎಸ್‌ನ ಸಿದ್ಧಾಂತಗಳಿಂದಾಗಿ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್‌ರನ್ನು ನಿಂದಿಸುವ ಮನಸ್ಥಿತಿ ಬೆಳೆದಿದೆ. ಇಂತಹ ಚಟುವಟಿಕೆಗಳು ಮಕ್ಕಳು ಮತ್ತು ಯುವಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ, ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಮನವಿ ಮಾಡಿದ್ದಾರೆ.
ಆರ್‌ಎಸ್‌ಎಸ್‌ನಿಂದ ಪರ್ಯಾಯ ಇತಿಹಾಸವನ್ನು ವಾಟ್ಸಾಪ್‌ನಲ್ಲಿ ಪಡೆಯುವ ನೀವು, ನಿಜವಾದ ಇತಿಹಾಸವನ್ನು ಓದಲು ಚಿಂತಿಸುವುದಿಲ್ಲ ಎಂದು ಖರ್ಗೆ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್‌ನ ಸೈದ್ಧಾಂತಿಕ ತಂದೆಯಾದ ವಿನಾಯಕ್ ದಾಮೋದರ್ ಸಾವರ್ಕರ್ ಅವರ “ಹಿಂದುತ್ವ: ಹಿಂದೂ ಯಾರು?” (1923) ಪುಸ್ತಕವನ್ನು ಉಲ್ಲೇಖಿಸಿ, ಸಾವರ್ಕರ್ ಭಾರತವನ್ನು “ಮಾತೃಭೂಮಿ” ಎಂದು ಕರೆಯದೆ ಪಿತೃಭೂಮಿ ಎಂದು ಕರೆದಿದ್ದನ್ನು ಒತ್ತಿ ಹೇಳಿದ್ದಾರೆ “ಇದು ಕೇವಲ ಶಬ್ದಾರ್ಥದ ಆಯ್ಕೆಯಲ್ಲ, ಸೈದ್ಧಾಂತಿಕ ಉದ್ದೇಶವಾಗಿತ್ತು. ಪಿತೃಭೂಮಿ’ ಭಕ್ತಿಯ ಬಗ್ಗೆ ಅಲ್ಲ, ಅದು ಪ್ರಾಬಲ್ಯದ ಬಗ್ಗೆ ಎಂದು ಖರ್ಗೆ ವಿವರಿಸಿದ್ದಾರೆ.
ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್ ಶಾಖೆಗಳಿಗೆ ಏಕೆ ಹೋಗುವುದಿಲ್ಲ? ಅವರು ಗೋ ರಕ್ಷಕರಾಗಿರುವುದಿಲ್ಲವೇಕೆ? ತ್ರಿಶೂಲ ದೀಕ್ಷೆ ತೆಗೆದುಕೊಂಡವರಿಲ್ಲವೇಕೆ? ಗಣವೇಷದಲ್ಲಿ ಲಾಠಿ ಹಿಡಿದು ಕುಳಿತಿರುವುದನ್ನು ಏಕೆ ನಾವು ನೋಡುವುದಿಲ್ಲ? ಬಿಜೆಪಿ ನಾಯಕರು ತಮ್ಮ ಮನೆಯಲ್ಲಿ ಮನುಸ್ಮೃತಿಯನ್ನು ಏಕೆ ಜಾರಿಗೊಳಿಸುವುದಿಲ್ಲ? ಎಂದು ಬಿಜೆಪಿ ಕಾರ್ಯಕ್ರತರಿಗೆ ಕೇಳಿದ್ದಾರೆ. ಜೊತೆಗೆ, 100 ವರ್ಷಗಳ ಇತಿಹಾಸವಿದ್ದರೂ ಆರ್‌ಎಸ್‌ಎಸ್ ಏಕೆ ನೋಂದಾಯಿತ ಸಂಘಟನೆಯಾಗಿಲ್ಲ? 2002ರ ಜನವರಿ 26ರಂದು ಮೊದಲ ಬಾರಿಗೆ ಆರ್‌ಎಸ್‌ಎಸ್ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿತು. ಇದರ ಬಗ್ಗೆ ಏನು ಹೇಳುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಅವರು ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಉಲ್ಲೇಖಿಸಿ, ಸರ್ವ ಜನಾಂಗದ ಶಾಂತಿಯ ತೋಟ, ರಸಿಕ ಕಂಗಳ ಸೆಳೆಯುವ ನೋಟ, ಕ್ರಿಶ್ಚಿಯನ್, ಮುಸಲ್ಮಾನ, ಪಾರಸಿಕ, ಜೈನರುದ್ಯಾನ ಎಂಬ ಸಾಲುಗಳನ್ನು ಒತ್ತಿಹೇಳಿದ್ದಾರೆ. ನಮ್ಮ ರಾಷ್ಟ್ರಕವಿಯ ಇತಿಹಾಸವೇ ಗೊತ್ತಿಲ್ಲದವರು ಆರ್‌ಎಸ್‌ಎಸ್‌ನ ಇತಿಹಾಸವನ್ನು ತಿಳಿಯುತ್ತಾರೆ ಎಂದು ನಾನು ಹೇಗೆ ನಿರೀಕ್ಷಿಸಲಿ? ಎಂದು ಖರ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.