1974ರ ನಂತರ ಭಾರತ ದೇಶಾದ್ಯಂತ ನಡೆದ ಎಲ್ಲ ದೊಡ್ಡ ಮಟ್ಟದ ಪ್ರತಿಭಟನೆಗಳ ಕುರಿತು ತನಿಖೆ ನಡೆಸಿ.. ಇಂಥಾದ್ದೊಂದು ಸೂಚನೆಯನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದರು. ಇದೇ ವರ್ಷ ಸೆಪ್ಟೆಂಬರ್ 15 ರಂದು ಬ್ಯೂರೋ ಆಫ್ ಪೊಲೀಸ್ ರಿಸರ್ಚ್ & ಡೆವಲಪ್ ಮೆಂಟ್ ವಿಭಾಗಕ್ಕೆ ಅಮಿತ್ ಶಾ ನೀಡಿದ್ದ ಈ ಸೂಚನೆ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಪ್ರತಿಭಟನೆ & ಹೋರಾಟಗಳ ಹಿಂದಿನ ಕಾಣದ ಕೈಗಳು ಯಾವುವು? ಹೋರಾಟಗಾರರಿಗೆ ಹಣಕಾಸಿನ ನೆರವು ಹೇಗೆ ಸಿಗುತ್ತೆ ಅನ್ನೋದನ್ನ ತಿಳಿಯೋದು ಸರ್ಕಾರದ ಉದ್ದೇಶ.. ಅದೂ ಕೂಡಾ ಸೆಪ್ಟೆಂಬರ್ 8 ರಂದು ನೇಪಾಳದಲ್ಲಿ ಜೆನ್ ಝಿ ಯುವ ಸಮೂಹ ದೊಡ್ಡ ಮಟ್ಟದ ಪ್ರತಿಭಟನೆ ಆರಂಭಿಸಿ ಸೆಪ್ಟೆಂಬರ್ 13ಕ್ಕೆ ನೇಪಾಳ ಸರ್ಕಾರವನ್ನೇ ಬುಡಮೇಲು ಮಾಡಿದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಹೊರಡಿಸಿದ್ದ ಈ ಆದೇಶ, ಭಾರತ ಸರ್ಕಾರಕ್ಕೆ ಇರಬಹುದಾದ ಆಡಳಿತ ವಿರೋಧಿ ಪ್ರತಿಭಟನೆಗಳ ಭೀತಿಯನ್ನ ಪರೋಕ್ಷವಾಗಿ ಬಿಂಬಿಸುವಂತಿತ್ತು..!
ಯಾರಿದು ಜೆನ್ ಝಿ..? ಸರ್ಕಾರಕ್ಕೆ ಏಕೆ ಆತಂಕ..?
ಇತ್ತೀಚಿನ ನೇಪಾಳ ಉದಾಹರಣೆಯನ್ನೇ ನೋಡೋದಾದ್ರೆ, ಯುವ ಶಕ್ತಿಯ ಒಗ್ಗಟ್ಟು ಏನು ಬೇಕಾದ್ರೂ ಮಾಡಬಲ್ಲದು ಅನ್ನೋದಕ್ಕೆ ಪ್ರಬಲ ಸಾಕ್ಷಿ..! ಮೂರೇ ದಿನಗಳ ಹೋರಾಟ ನೇಪಾಳ ಸರ್ಕಾರವನ್ನೇ ಮಕಾಡೆ ಮಲಗಿಸಬಲ್ಲ ಸಾಮರ್ಥ್ಯ ಸಂಪಾದಿಸಿದ್ದು ಹುಡುಗಾಟದ ವಿಚಾರ ಅಲ್ಲವೇ ಅಲ್ಲ.. ಹೀಗಾಗಿ, ಈ ಘಟನೆ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆಯ ಸರ್ಕಾರಗಳಿಗೆ, ರಾಜಕೀಯ ವಲಯಕ್ಕೆ ತಲ್ಲಣ ಮೂಡಿಸಿರೋದು ಸುಳ್ಳಲ್ಲ. ಯುವಕರು ನೇತೃತ್ವದ ಪ್ರತಿಭಟನೆಗಳು ಏನೆಲ್ಲಾ ಮಾಡಿಬಿಡಬಹುದು ಅನ್ನೋ ಪ್ರಶ್ನೆಗೆ ನೇಪಾಳವೇ ಸ್ಪಷ್ಟ ನಿದರ್ಶನ..
ಲಡಾಖ್ ನಲ್ಲಿ ಜೆನ್ ಝಿ ಕಿಡಿ..?
ನೇಪಾಳದ ರಾಜಕೀಯ ಸ್ಥಿತ್ಯಂತರದ ಬೆನ್ನಲ್ಲೇ ಲಡಾಖ್ ನಲ್ಲೂ ಯುವ ಸಮೂಹ ರೊಚ್ಚಿಗೆದ್ದಿತ್ತು. ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ ಚುಕ್ ಸಾರಥ್ಯದಲ್ಲಿ ನಡೆದ ಈ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದಿದ್ದೇ ತಡ, ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಂಡು ಪ್ರತಿಭಟನೆ ಹತ್ತಿಕ್ಕಿತು. ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕಾಗಿ ನಡೆದ ಈ ಹೋರಾಟ ಜೆನ್ ಝಿಗಳು ನಡೆಸಿದ ಹೋರಾಟ ಅಂತಾನೇ ಬಿಂಬಿತವಾಗ್ತಿದೆ. ಈ ಹೋರಾಟಗಾರ ಸಾರಥಿ ಸೋನಂ ವಾಂಗ್ ಚುಕ್ ಈಗಾಗಲೇ ಜೈಲು ಪಾಲಾಗಿದ್ದಾರೆ. ಆದರೆ, ಇದು ಕೇವಲ ಒಂದು ಆರಂಭಿಕ ಕಿಡಿಯೇ ಎಂಬ ಭೀತಿ ಸೃಷ್ಟಿಯಾಗಿರೋದಂತೂ ಸುಳ್ಳಲ್ಲ..!
1995 ರಿಂದ 2005ರ ನಡುವೆ ಜನಿಸಿದವರನ್ನ ‘ಜೆನ್ ಝಿ’ ಪೀಳಿಗೆ ಅಂತಾ ಕರೆಯೋ ಸಂಪ್ರದಾಯ ಆರಂಭವಾದ ದಿನದಿಂದಲೇ ಈ ಯುವ ಸಮೂಹದಿಂದ ಹಲವು ನಿರೀಕ್ಷೆಗಳನ್ನೂ ಮಾಡಲಾಗ್ತಿದೆ..! ಉದಾರೀಕರಣ & ಜಾಗತೀಕರಣಕ್ಕೆ ಭಾರತ ಸೇರಿದಂತೆ ಇಡೀ ವಿಶ್ವ ಸಂಪೂರ್ಣವಾಗಿ ತೆರೆದುಕೊಂಡ ನಂತರದ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಸಮೂಹದ ಶಕ್ತಿ ಒಂದೆರಡಲ್ಲ..!
ಬಹುಸಂಖ್ಯಾತ ಯುವಕರೇ ಶಕ್ತಿ..!
ಭಾರತದಲ್ಲಿ ಯುವ ಜನರೇ ದೇಶದ ಜನಸಂಖ್ಯೆಯ ಗಣನೀಯ ಭಾಗ. ದೇಶದ ಪ್ರಗತಿಯ ಮಟ್ಟಿಗೆ, ಅಭಿವೃದ್ಧಿಗೆ ಈ ಸಮೂಹವೇ ಪ್ರೇರಕ ಶಕ್ತಿ.. ಜೊತೆಯಲ್ಲೇ ಈ ಜೆನ್ ಝಿ ಸಮುದಾಯಕ್ಕೆ ಇರಬಹುದಾದ ಅಸಮಾಧಾನಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆಯಬಹುದು ಅನ್ನೋದು ಆಡಳಿತಾರೂಢ ರಾಜಕೀಯ ಪಕ್ಷಗಳ ಪ್ರಮುಖ ಆತಂಕ..!
ಸೋಶಿಯಲ್ ಮೀಡಿಯಾ ಪ್ರಭಾವ
ಜೆನ್ ಝಿ ಸಮುದಾಯದ ಆಂದೋಲನಗಳು ಬಹುತೇಕ ಸೋಶಿಯಲ್ ಮೀಡಿಯಾ ಪ್ರಭಾವದಿಂದಲೇ ನಡೆಯುತ್ತೆ. ಸಾಮಾಜಿಕ ಜಾಲತಾಣಗಳ ಮೂಲಕವೇ ಅತ್ಯಂತ ವೇಗವಾಗಿ ದೇಶವ್ಯಾಪಿ ಹರಡುವ ಸಾಮರ್ಥ್ಯ ಹೊಂದಿವೆ. ಪ್ರಚಾರ – ಅಪಪ್ರಚಾರ ಯಾವುದೇ ಇರಲಿ.. ಯುವ ಸಮುದಾಯವನ್ನು ಬಹು ಬೇಗ ತಲುಪುವ & ಪ್ರಚೋದಿಸುವ ವೇದಿಕೆಯಾಗಿ ಸೋಷಿಯಲ್ ಮೀಡಿಯಾ ಬಳಕೆ ಆಗ್ತಿದೆ.
ರಾಜಕೀಯ ಲಾಭಕ್ಕಾಗಿ ಶುರುವಾಗಿದೆ ಲಾಬಿ..!
ರಾಜಕೀಯ ಉದ್ದೇಶಗಳಿಗೆ ಜೆನ್ ಝಿ ಸಮುದಾಯವನ್ನ ಬಳಕೆ ಮಾಡಿಕೊಳ್ಳಬೇಕು ಅನ್ನೋ ಐಡಿಯಾ ರಾಜಕೀಯ ಪಕ್ಷಗಳಿಗೆ ಈಗಾಗಲೇ ಬಂದುಬಿಟ್ಟಿದೆ..! ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸುತ್ತಾ ಜೆನ್ ಝಿ ಸಮೂಹ ಕ್ರಾಂತಿ ಮಾಡಬೇಕು, ಅವರ ಜೊತೆಗೆ ನಾನಿದ್ದೇನೆ ಎಂದಿದ್ದರು. ಇದೀಗ ಅದೇ ಹಾದಿಯಲ್ಲಿ ಸಾಗಿರುವ ತಮಿಳು ನಟ ವಿಜಯ್ ಅವರ ಟಿವಿಕೆ ಪಕ್ಷದ ನಾಯಕ ಆದವ್ ಅರ್ಜುನ್, ದುಷ್ಟ ಸರ್ಕಾರದ ವಿರುದ್ಧ ಜೆನ್ ಝಿ ಸಮುದಾಯ ಹೋರಾಟ ಮಾಡಬೇಕು ಎಂದಿದ್ದಾರೆ.. ಮತ್ತೊಂದೆಡೆ ಜೆನ್ ಝಿ ಸಮುದಾಯವನ್ನು ಹೋರಾಟಕ್ಕೆ ಪ್ರಚೋದಿಸಿದ ರಾಹುಲ್ ಗಾಂಧಿ ಅವರಿಗೆ ಅದೇ ಸಮುದಾಯದ ಹೋರಾಟಗಾರರು ‘ಎದೆಗೇ ಗುಂಡು ಹಾರಿಸುತ್ತಾರೆ’ ಎಂದು ಕೇರಳ ಬಿಜೆಪಿ ವಕ್ತಾರ ಪ್ರಿಂಟು ಮಹದೇವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..!
ಯುವ ಕ್ರಾಂತಿ.. ಯಾಮಾರಿದ್ರೆ ಭ್ರಾಂತಿ..!
ರಾಜಕಾರಣಿಗಳು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು, ಆಡಳಿತದಲ್ಲಿರುವ ಸರ್ಕಾರಗಳನ್ನು ಉರುಳಿಸಲು ಯುವಕರನ್ನ ಬಳಕೆ ಮಾಡಿಕೊಳ್ಳುವ ಪ್ಲಾನ್ ಮಾಡ್ತಿದ್ದಾರಾ..? ಜೆನ್ ಝಿ ಕ್ರಾಂತಿ ಹೆಸರಿನಲ್ಲಿ ತಮ್ಮ ರಾಜಕೀಯ ಬಲ ಪ್ರದರ್ಶಿಸಲು ಮುಂದಾಗ್ತಿದ್ದಾರಾ..? ‘ಜೆನ್ ಝಿ ಯುವ ಕ್ರಾಂತಿ’ ಎಂಬ ಪರಿಕಲ್ಪನೆ, ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳಿಗೆ ದುರ್ಬಳಕೆ ಆಗಬಹುದಾ..?
ಈ ಎಲ್ಲಾ ಪ್ರಶ್ನೆಗಳ ನಡುವೆ, ನೇಪಾಳದಲ್ಲಿ ಅಲ್ಲಿನ ಯುವ ಸಮೂಹ ನೀಡಿದ ಸಂದೇಶ ಸ್ಪಷ್ಟವಾಗಿದೆ. ಜನತೆಯ ಅಸಮಾಧಾನವನ್ನು ನಿರ್ಲಕ್ಷಿಸಿದರೆ, ಅಧಿಕಾರ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಎದುರಾಗಬಹುದು..! ಈ ಪಾಠವನ್ನ ಭಾರತದ ಸರ್ಕಾರಗಳು ಕಲಿತಿರುವಂತೆ ಕಾಣುತ್ತಿದೆ. ಆದರೆ ಅಧಿಕಾರದಿಂದ ದೂರ ಇರುವ ರಾಜಕಾರಣಿಗಳು ಮಾತ್ರ ಜೆನ್ ಝಿ ಯುವ ಶಕ್ತಿಯ ಲಾಭ ಪಡೆಯಲು ಸಿದ್ಧರಾಗಿದ್ದಾರೆ..!