ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 412 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡದ ಪರವಾಗಿ ಸ್ಮೃತಿ ಮಂಧಾನ ಕೇವಲ 63 ಎಸೆತಗಳಲ್ಲಿ 17 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 125 ರನ್ ಗಳಿಸಿದರು. ಆದರೂ ಭಾರತ ತಂಡ 369 ರನ್ ಗಳಿಸಿ 43 ರನ್‌ಗಳಿಂದ ಸೋಲನ್ನು ಒಪ್ಪಿಕೊಂಡಿತು.
ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಅವರ ಸ್ಫೋಟಕ ಶತಕದೊಂದಿಗೆ ಹೊಸ ಇತಿಹಾಸ ಸೃಷ್ಟಿಯಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಕೇವಲ 50 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.
ಈ ಸಿಡಿಲಬ್ಬರದ ಶತಕದೊಂದಿಗೆ ಸ್ಮೃತಿ ಮಂಧಾನ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರ್ತಿಯಾಗಿ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ನ್ಯೂಝಿಲೆಂಡ್‌ನ ಸುಝಿ ಬೆಟ್ಸ್ ಮತ್ತು ಇಂಗ್ಲೆಂಡ್‌ನ ಟ್ಯಾಮಿ ಬ್ಯೂಮೆಂಟ್ ಹೆಸರಿನಲ್ಲಿತ್ತು. ಇವರಿಬ್ಬರು ಆರಂಭಿಕರಾಗಿ ತಲಾ 12 ಶತಕಗಳನ್ನು ಗಳಿಸಿದ್ದರು.
ಈಗ 13ನೇ ಶತಕವನ್ನು ಬಾರಿಸುವ ಮೂಲಕ ಸ್ಮೃತಿ ಮಂಧಾನ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಶತಕ ಗಳಿಸಿದ ಆರಂಭಿಕ ಆಟಗಾರ್ತಿಯಾಗಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಬಾರಿಸಿದ ಹೆಗ್ಗಳಿಕೆಯನ್ನೂ ಅವರು ಪಡೆದಿದ್ದಾರೆ.
ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಶತಕ ಗಳಿಸಿದ ಮಹಿಳಾ ಬ್ಯಾಟರ್ ಎಂಬ ಕೀರ್ತಿಯನ್ನೂ ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 13 ಶತಕಗಳೊಂದಿಗೆ ಸ್ಮೃತಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 15 ಶತಕಗಳೊಂದಿಗೆ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ದೆಹಲಿಯಲ್ಲಿ ಗಳಿಸಿದ ಶತಕದೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರ್ತಿಯಾಗಿ ಸ್ಮೃತಿ ಮಿಂಚಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ಈವರೆಗೆ 4 ಶತಕಗಳನ್ನು ಬಾರಿಸಿದ್ದಾರೆ.
ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಕೇವಲ 23 ಎಸೆತಗಳಲ್ಲಿ ಅರ್ಧಶತಕವನ್ನು ಮತ್ತು 50 ಎಸೆತಗಳಲ್ಲಿ ಶತಕವನ್ನು ಪೂರೈಸಿದರು. ಇದರೊಂದಿಗೆ ಭಾರತದ ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದ ಅರ್ಧಶತಕ ಮತ್ತು ಶತಕ ಗಳಿಸಿದ ದಾಖಲೆಯನ್ನು ಅವರು ಸೃಷ್ಟಿಸಿದ್ದಾರೆ. ಒಟ್ಟಾರೆಯಾಗಿ ಒಂದು ಸ್ಫೋಟಕ ಶತಕದೊಂದಿಗೆ ಸ್ಮೃತಿ ಮಂಧಾನ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ.





