ಬೆಂಗಳೂರು: ಕನ್ನಡ ಚಿತ್ರರಂಗದ ದಂತಕಥೆಗಳಾದ ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ. ಇಂದು (ಸೆಪ್ಟೆಂಬರ್ 11) ಸಚಿವ ಎಚ್.ಕೆ. ಪಾಟೀಲ್ ಅವರು ಈ ಸುದ್ದಿಯನ್ನು ತಿಳಿಸಿದರು. ಈ ಘೋಷಣೆಯಿಂದ ಅಭಿಮಾನಿಗಳಲ್ಲಿ ಅಪಾರ ಸಂತೋಷ ಮನೆಮಾಡಿದೆ. ಈ ಮೊದಲು ಚಿತ್ರರಂಗದಿಂದ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಲಾಗಿತ್ತು.
ಡಾ. ವಿಷ್ಣುವರ್ಧನ್ ಅವರು ‘ಸಾಹಸ ಸಿಂಹ’ ಎಂದೇ ಪ್ರಸಿದ್ಧರಾಗಿದ್ದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. 1972ರಲ್ಲಿ ‘ವಂಶವೃಕ್ಷ’ ಮತ್ತು ‘ನಾಗರಹಾವು’ ಸಿನಿಮಾಗಳೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಅವರು, ವೈವಿಧ್ಯಮಯ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದರು. ಅದೇ ರೀತಿ, ಬಿ. ಸರೋಜಾದೇವಿ ಅವರು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಅವರ ಕೊಡುಗೆಯನ್ನು ಗುರುತಿಸಿ ‘ಕರ್ನಾಟಕ ರತ್ನ’ ನೀಡಬೇಕು ಎಂಬುದು ಅಭಿಮಾನಿಗಳ ಮತ್ತು ಕುಟುಂಬದವರ ಬಹುಕಾಲದ ಬೇಡಿಕೆಯಾಗಿತ್ತು.
ಇತ್ತೀಚೆಗೆ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಅಲ್ಲದೇ, ಹಿರಿಯ ನಟಿಯರಾದ ಜಯಮಾಲಾ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಅವರು ಕೂಡ ಸಿಎಂ ಅವರನ್ನು ಭೇಟಿಯಾಗಿ ಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದರು. ಈ ಮನವಿಗಳ ನಂತರ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬಿ. ಸರೋಜಾದೇವಿ ಅವರು ಜುಲೈ 14ರಂದು ನಿಧನರಾಗಿದ್ದರು. ಈ ಪ್ರಶಸ್ತಿ ಘೋಷಣೆಯು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು.






