ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪ್ರೀತಿ ಮತ್ತು ಸ್ನೇಹಕ್ಕೆ ಸೇತುವೆಯಾಗುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಇದೇ ಮಾಧ್ಯಮಗಳು ಮೋಸ ಮತ್ತು ದುರಂತಕ್ಕೆ ಕಾರಣವಾಗುತ್ತವೆ. ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದ ಈ ಘಟನೆಯು ಅಂತಹದ್ದೇ ಒಂದು ಉದಾಹರಣೆ. ಇನ್‌ಸ್ಟಾಗ್ರಾಂನಲ್ಲಿ ಫಿಲ್ಟರ್ ಬಳಸಿ ಹುಡುಗಿಯಂತೆ ಕಾಣಿಸಿಕೊಂಡ 52 ವರ್ಷದ ಮಹಿಳೆಯನ್ನು 26 ವರ್ಷದ ಯುವಕನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರೀತಿಯ ಕತೆ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.
26 ವರ್ಷದ ಅರುಣ್ ರಜಪೂತ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ. ಸುಂದರ ಹುಡುಗಿಯರ ಪ್ರೊಫೈಲ್ ಕಂಡರೆ ಸಾಕು, ಮೆಸೇಜ್ ಕಳುಹಿಸುತ್ತಿದ್ದ. ಈ ಬಾರಿ ಅವನ ಗಮನ ಸೆಳೆದದ್ದು ಪಿಯುಸಿ ಹುಡುಗಿಯಂತೆ ಕಾಣುತ್ತಿದ್ದ ಪ್ರೊಫೈಲ್. ಆದರೆ, ವಾಸ್ತವದಲ್ಲಿ ಅದು 52 ವರ್ಷದ ರಾಣಿ ಎಂಬ ಮಹಿಳೆಯದ್ದು. ಫಿಲ್ಟರ್ ಬಳಸಿ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಕಾರಣ ಆಕೆ ಯುವತಿಯಂತೆ ಕಾಣಿಸುತ್ತಿದ್ದಳು. ಅರುಣ್ ಮೆಸೇಜ್ ಕಳುಹಿಸಿದ್ದಕ್ಕೆ ಕೆಲ ದಿನಗಳ ಬಳಿಕ ರಾಣಿಯಿಂದ ಪ್ರತಿಕ್ರಿಯೆ ಬಂದಿತು. ಇದು ಅವರ ನಡುವಿನ ಸ್ನೇಹಕ್ಕೆ ಆರಂಭವಾಯಿತು.
ಸ್ನೇಹದಿಂದ ಪ್ರೀತಿಗೆ ತಿರುವು
ಸ್ನೇಹ ಗಾಢವಾದಂತೆ ಫೋನ್ ನಂಬರ್ ವಿನಿಮಯಗೊಂಡಿತು. ರಾಣಿ ತನ್ನ ವಯಸ್ಸನ್ನು ಬಹಿರಂಗಪಡಿಸದೆ ಇದ್ದರೆ, ಅರುಣ್ ಕೂಡ ಕೇಳಲಿಲ್ಲ. ಮಾತುಕತೆಗಳು ರೊಮ್ಯಾಂಟಿಕ್ ದಿಕ್ಕಿಗೆ ತಿರುಗಿದವು. ಈ ನಡುವೆ ಅರುಣ್‌ನ ಆರ್ಥಿಕ ಸಂಕಷ್ಟಕ್ಕೆ ರಾಣಿ ನೆರವು ನೀಡುತ್ತಾ ಬಂದಳು. ಸುಮಾರು 1 ರಿಂದ 1.5 ಲಕ್ಷ ರೂಪಾಯಿ ಹಣವನ್ನು ಆಕೆ ನೀಡಿದ್ದಳು. ಅರುಣ್ ಮದುವೆಯಾಗುವ ಭರವಸೆ ನೀಡಿದ್ದ.
ಮೊದಲ ಭೇಟಿಯಲ್ಲಿ ನಿರಾಸೆ ಮತ್ತು ಜಗಳ
ಅಂತಿಮವಾಗಿ ಇಬ್ಬರು ಭೇಟಿಯಾಗಲು ನಿರ್ಧರಿಸಿದರು. ಅರುಣ್ ತನ್ನ ಗೆಳೆಯರಿಗೆ ಸಂತೋಷ ಹಂಚಿಕೊಂಡು ಭೇಟಿಗೆ ತೆರಳಿದ. ಆದರೆ, ರಾಣಿಯ ನಿಜವಯಸ್ಸು ಕಂಡು ಅವನಿಗೆ ಆಘಾತವಾಯಿತು. ಆಕೆ ಹುಡುಗಿಯಲ್ಲ, ಮುದುಕಿ ಎಂದು ಆಕ್ರೋಶಗೊಂಡ. ಮದುವೆಯಾಗುವಂತೆ ರಾಣಿ ಒತ್ತಾಯಿಸಿದರೆ, ಅರುಣ್ ನಿರಾಕರಿಸಿದ. ಇದರಿಂದ ಜಗಳ ಶುರುವಾಯಿತು. ತನ್ನಿಂದ ಪಡೆದ ಹಣ ವಾಪಸ್ ನೀಡುವಂತೆ ಮತ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದಳು.
ಹಣ ಮತ್ತು ಒತ್ತಾಯದಿಂದ ಸಂಕಷ್ಟಕ್ಕೆ ಸಿಲುಕಿದ ಅರುಣ್, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ. ಅಲ್ಲಿ ಆಕೆಯ ದುಪ್ಪಟದಿಂದ ಬಿಗಿದು ಹತ್ಯೆ ಮಾಡಿ, ಮೃತದೇಹವನ್ನು ಎಸೆದು ಪರಾರಿಯಾದ. ಪೊಲೀಸರು ತನಿಖೆ ನಡೆಸಿ ಅರುಣ್ ರಜಪೂತ್‌ನನ್ನು ಬಂಧಿಸಿದರು. ವಿಚಾರಣೆಯಲ್ಲಿ ಇಡೀ ಘಟನೆ ಬಯಲಾಯಿತು.





