ಬೆಂಗಳೂರು: ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರ (DGP) ಹುದ್ದೆಗೆ ಡಾ. ಎಂ.ಎ. ಸಲೀಂ ಅವರನ್ನು ಅಂತಿಮವಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಡಾ. ಸಲೀಂ ಅವರು 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಹಿಂದೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಡಾ. ಅಲೋಕ್ ಮೋಹನ್ ಅವರು 2025ರ ಏಪ್ರಿಲ್ 30ರಂದು ನಿವೃತ್ತರಾಗಿದ್ದರು. ಅವರ ಸೇವಾವಧಿಯನ್ನು ಮೇ 21ರವರೆಗೆ ವಿಸ್ತರಿಸಲಾಗಿತ್ತು. ಅಲೋಕ್ ಮೋಹನ್ ಅವರ ನಿವೃತ್ತಿಯ ಬಳಿಕ ಡಾ. ಎಂ.ಎ. ಸಲೀಂ ಅವರನ್ನು ಹಂಗಾಮಿ DGP ಆಗಿ ನೇಮಕ ಮಾಡಲಾಗಿತ್ತು. ಆದರೆ, ಈಗ ಕೇಂದ್ರ ಗೃಹ ಇಲಾಖೆಯಿಂದ ಮೂವರು DGP ರ‍್ಯಾಂಕ್‌ನ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಪರಿಗಣಿಸಿ, ಡಾ. ಸಲೀಂ ಅವರನ್ನು ಖಾಯಂ DGP ಆಗಿ ಆಯ್ಕೆ ಮಾಡಲಾಗಿದೆ.
DGP ಹುದ್ದೆಗೆ ತೀವ್ರ ಸ್ಪರ್ಧೆಯಿತ್ತು. ಡಾ. ಸಲೀಂ ಜೊತೆಗೆ, ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಡಿಜಿಪಿ ಪ್ರಣವ್ ಮೊಹಾಂತಿ ಕೂಡ ರೇಸ್‌ನಲ್ಲಿದ್ದರು. ಕೇಂದ್ರ ಗೃಹ ಇಲಾಖೆಯಿಂದ ಶಿಫಾರಸು ಮಾಡಲಾದ ಮೂವರ ಪಟ್ಟಿಯಿಂದ ಡಾ. ಸಲೀಂ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಡಾ. ಎಂ.ಎ. ಸಲೀಂ, 1966ರ ಜೂನ್ 25ರಂದು ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಜನಿಸಿದವರು. 1989ರಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, 1993ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪೊಲೀಸ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು 2010ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸಿಐಡಿಯ DGP ಆಗಿ ಕಾರ್ಯನಿರ್ವಹಿಸಿದ್ದ ಅವರನ್ನು, ಸೇವಾ ಹಿರಿತನದ ಆಧಾರದ ಮೇಲೆ ಈ ಜವಾಬ್ದಾರಿಯುತ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಡಾ. ಸಲೀಂ ಅವರ ಅನುಭವ ಮತ್ತು ಜ್ಞಾನವು ಮಹತ್ವದ ಪಾತ್ರ ವಹಿಸಲಿದೆ ಎಂದು ರಾಜ್ಯ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.