ಉತ್ತರ ಪ್ರದೇಶ: ವರದಕ್ಷಿಣೆಗಾಗಿ ಅತ್ತೆ-ಮಾವ ಮತ್ತು ಕುಟುಂಬದ ಸದಸ್ಯರು ಸೇರಿಕೊಂಡು ಸೊಸೆಗೆ ಬಲವಂತವಾಗಿ ಆಸಿಡ್ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಕಲಾ ಖೇಡಾ ಗ್ರಾಮದಲ್ಲಿ ನಡೆದಿದೆ. ಆಕೆ 17 ದಿನಗಳ ಚಿಕಿತ್ಸೆಯ ಬಳಿಕ ಮೊರಾದಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. 23 ವರ್ಷದ ಗುಲ್ ಫಿಜಾ ಎಂಬ ಮಹಿಳೆಗೆ ಆಕೆಯ ಅತ್ತೆ-ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ.
ಗುಲ್ ಫಿಜಾ ಅವರ ತಂದೆ ಫುರ್ಖಾನ್ ಪ್ರಕಾರ, ಗುಲ್ ಫಿಜಾಳನ್ನು ಸುಮಾರು ಒಂದು ವರ್ಷದ ಹಿಂದೆ ಅಮ್ರೋಹಾದ ಕಲಾ ಖೇಡಾ ಗ್ರಾಮದ ಪರ್ವೇಜ್ ಎಂಬಾತನ ಜೊತೆ ವಿವಾಹವಾಗಿತ್ತು. ಮದುವೆಯಾದಾಗಿನಿಂದಲೂ ಆಕೆಯ ಪತಿ ಪರ್ವೇಜ್, ಅತ್ತೆ-ಮಾವ, ಮತ್ತು ಕುಟುಂಬದ ಇತರ ಸದಸ್ಯರು, 10 ಲಕ್ಷ ರೂಪಾಯಿ ನಗದು ಮತ್ತು ಕಾರನ್ನು ವರದಕ್ಷಿಣೆಯಾಗಿ ತರಲು ಒತ್ತಡ ಹೇರಿದ್ದರು. ಈ ಒತ್ತಡದಿಂದ ಗುಲ್ ಫಿಜಾ ನಿರಂತರ ಕಿರುಕುಳಕ್ಕೆ ಒಳಗಾಗಿದ್ದಳು.
ಆಗಸ್ಟ್ 11ರಂದು ಗುಲ್ ಫಿಜಾಳ ಅತ್ತೆ-ಮಾವ, ಆಕೆಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿ ಆಕೆಯನ್ನು ಮೊರಾದಾಬಾದ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ 17 ದಿನಗಳ ಚಿಕಿತ್ಸೆಯ ನಂತರ ಆಕೆ ಮೃತಪಟ್ಟಳು. ಆಕೆಯ ಮರಣೋತ್ತರ ಪರೀಕ್ಷೆಯನ್ನು ಮೊರಾದಾಬಾದ್‌ನಲ್ಲಿ ನಡೆಸಲಾಗಿದೆ.
ಗುಲ್ ಫಿಜಾಳ ತಂದೆ ಫುರ್ಖಾನ್ ದೂರು ದಾಖಲಿಸಿದ್ದು, ಪರ್ವೇಜ್, ಆಸಿಮ್, ಗುಲಿಸ್ತಾ, ಮೊನಿಶ್, ಸೈಫ್, ಡಾ. ಭೂರಾ, ಮತ್ತು ಬಬ್ಬು ಸೇರಿದಂತೆ ಏಳು ಜನರ ವಿರುದ್ಧ ಭಾರತೀಯ ಕಾನೂನು ಸಂಹಿತೆ (BNS)ಯ ಸಂಬಂಧಿತ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿದೆ.
ಸಿಟಿ ಸರ್ಕಲ್ ಆಫೀಸರ್ ಶಕ್ತಿ ಸಿಂಗ್ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಕೊಲೆ ಆರೋಪವನ್ನು ಸೇರಿಸಲಾಗುವುದು. ಆರೋಪಿಗಳೆಲ್ಲರೂ ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆಗಸ್ಟ್ 29ರಂದು ಗುಲ್ ಫಿಜಾಳ ಪತಿ ಪರ್ವೇಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.