ಬೆಂಗಳೂರು: ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಿ, ಚಿನ್ನದ ಪದಕ ವಿಜೇತರಿಗೆ 7 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 5 ಲಕ್ಷ ರೂ., ಮತ್ತು ಕಂಚಿನ ಪದಕ ವಿಜೇತರಿಗೆ 3 ಲಕ್ಷ ರೂ. ನೀಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಯುವನಿಕಾ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ನೇರ ನಗದು ಬಹುಮಾನವನ್ನು ವಿತರಿಸಿ ಮಾತನಾಡಿದ ಅವರು, ಈ ಘೋಷಣೆಯನ್ನು ಮಾಡಿದರು.
ಕರ್ನಾಟಕದ ಕ್ರೀಡಾಪಟುಗಳ ಸಾಧನೆ
ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು 34 ಚಿನ್ನ, 18 ಬೆಳ್ಳಿ, ಮತ್ತು 28 ಕಂಚಿನ ಪದಕಗಳನ್ನು ಗೆದ್ದು, ರಾಜ್ಯಕ್ಕೆ ಐದನೇ ಸ್ಥಾನವನ್ನು ತಂದಿಟ್ಟಿದ್ದಾರೆ. ಈ ಸಾಧನೆಯು ರಾಜ್ಯಕ್ಕೆ ಕೀರ್ತಿ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ತಿಳಿಸಿದರು. “ಕ್ರೀಡಾಪಟುಗಳ ಈ ಸಾಧನೆ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಮುಂದಿನ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ದೊರಕಲಿ ಎಂದು ಆಶಿಸುತ್ತೇನೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.
2015ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾಮಯ್ಯ ಅವರು ಚಿನ್ನದ ಪದಕ ವಿಜೇತರಿಗೆ 5 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ 3 ಲಕ್ಷ, ಮತ್ತು ಕಂಚಿನ ಪದಕ ವಿಜೇತರಿಗೆ 2 ಲಕ್ಷ ರೂ. ನಗದು ಬಹುಮಾನ ನೀಡುವ ಘೋಷಣೆ ಮಾಡಿದ್ದರು. ಈ ಯೋಜನೆಯನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಮನವಿಯನ್ನು ಒಪ್ಪಿಕೊಂಡು, ಈಗ ಬಹುಮಾನದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಕ್ರೀಡಾಪಟುಗಳ ಜೊತೆಗೆ, ಅವರ ಯಶಸ್ಸಿಗೆ ಸಹಕರಿಸುವ ತರಬೇತುದಾರರು ಮತ್ತು ಮ್ಯಾನೇಜರ್‌ಗಳಿಗೂ ನಗದು ಬಹುಮಾನ ನೀಡಲಾಗುವುದು. ರಾಜ್ಯದ ಕ್ರೀಡಾಕ್ಷೇತ್ರಕ್ಕೆ ಸರ್ಕಾರ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತಿದೆ. ಕ್ರೀಡಾಪಟುಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಸಿಎಂ ತಿಳಿಸಿದರು. ಕ್ರೀಡೆಯ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡುವಂತೆ ಕ್ರೀಡಾಪಟುಗಳಿಗೆ ಸಲಹೆ ನೀಡಿದ ಅವರು, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಆದೇಶವನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲು ಆದೇಶ ನೀಡಲಾಗಿದ್ದು, ಈಗಾಗಲೇ ಗ್ರೂಪ್ 1 ನ ಡಿವೈಎಸ್ ಪಿ ಹುದ್ದೆಗೆ ನೇಮಕಾತಿ ನೀಡಲಾಗಿದೆ. ಕ್ರೀಡಾಪಟು ಸುನಿಲ್ ಭಾಟಿಯವರು ಗ್ರೂಪ್ -1 ಸ್ಥಾನ ಸಿಕ್ಕಿದ್ದು ಪೋಲಿಸ್ ಅಬಕಾರಿ ಇಲಾಖೆಯಲ್ಲಿ ಡಿವೈಎಸ್ಪಿಯಾಗಿದ್ದಾರೆ. ಬಡ್ತಿಯಾಗಿ ಉನ್ನತ ಹುದ್ದೆಗೆ ಹೋಗುವ ಅವಕಾಶಗಳೂ ಇರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಬಹುಮಾನ
ಬಜೆಟ್‌ನಲ್ಲಿ ಘೋಷಿಸಿರುವಂತೆ, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದವರಿಗೆ 5 ಕೋಟಿ, ಬೆಳ್ಳಿ ಪದಕಕ್ಕೆ 3 ಕೋಟಿ, ಮತ್ತು ಕಂಚಿನ ಪದಕಕ್ಕೆ 2 ಕೋಟಿ ರೂ. ಬಹುಮಾನ ನೀಡಲಾಗುವುದು. “ಇದು ಆಮಿಷವಲ್ಲ, ಕ್ರೀಡಾಪಟುಗಳಿಗೆ ಪ್ರೋತ್ಸಾಹ” ಎಂದು ಸಿಎಂ ಸ್ಪಷ್ಟಪಡಿಸಿದರು. “ಪದಕ ಗೆಲ್ಲುವುದಕ್ಕಿಂತ ಸಂತೋಷದಾಯಕವಾದದ್ದು ಬೇರೆ ಇಲ್ಲ. ಸೋಲು-ಗೆಲುವು ಒಂದೇ ಆಗಿರುತ್ತದೆ, ಆದರೆ ಭಾಗವಹಿಸುವುದು ಮುಖ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಒಲಿಂಪಿಕ್ಸ್‌ಗೆ ತಯಾರಿ
ಕರ್ನಾಟಕದ ಕ್ರೀಡಾಪಟುಗಳು ದೇಶದಲ್ಲಿ ಐದನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ಶ್ರದ್ಧೆ ಮತ್ತು ಏಕಾಗ್ರತೆಯಿಂದ ತಯಾರಿ ನಡೆಸಬೇಕು ಎಂದು ಸಿಎಂ ಸಲಹೆ ನೀಡಿದರು. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಪ್ರತಿ ವರ್ಷ 60 ಕ್ರೀಡಾಪಟುಗಳಿಗೆ 10 ಲಕ್ಷ ರೂ. ತರಬೇತಿ ಧನಸಹಾಯವನ್ನು ಸರ್ಕಾರ ನೀಡುತ್ತಿದೆ ಎಂದು ಸಿಎಂ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರೂ ಆದ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಮತ್ತು ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





