ಉತ್ತರ ಪ್ರದೇಶ: ಆರ್ಥಿಕ ಸಾಲದ ಭಾರವನ್ನು ತಾಳಲಾರದೇ ಉದ್ಯಮಿ ದಂಪತಿಗಳು ತಮ್ಮ 4 ವರ್ಷದ ಮಗನಿಗೆ ವಿಷಪ್ರಾಶನ ಮಾಡಿ, ನಂತರ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಶಹಜಹಾನ್ಸುರದಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ, ಸಂಬಂಧಿಕರು ದಂಪತಿಗಳಾದ ಸಚಿನ್ ಗ್ರೂವರ್ (30) ಮತ್ತು ಶಿವಾನಿ (28) ಹಾಗೂ ಅವರ 4 ವರ್ಷದ ಮಗನ ಶವಗಳನ್ನು ಮನೆಯ ಕೋಣೆಗಳಲ್ಲಿ ನೋಡಿದ್ದಾರೆ. ಪೊಲೀಸರ ಪ್ರಕಾರ, ಕೈಮಗ್ಗ ಉದ್ಯಮಿಯಾಗಿದ್ದ ಸಚಿನ್ ಮತ್ತು ಶಿವಾನಿ ಭಾರೀ ಸಾಲದ ಸುಳಿಯಲ್ಲಿ ಸಿಲುಕಿದ್ದರು. ತೀವ್ರ ಆರ್ಥಿಕ ಒತ್ತಡದಿಂದ ಮನನೊಂದಿದ್ದ ದಂಪತಿಗಳು ಈ ದಾರುಣ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಸ್ಥಳದಿಂದ ಒಂದು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಈ ಪತ್ರದಲ್ಲಿ ಸಚಿನ್, ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ವಿವರವಾಗಿ ಬರೆದಿದ್ದಾರೆ. “ನನ್ನ ಕುಟುಂಬದ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ, ಅವರೆಲ್ಲರೂ ನನ್ನನ್ನು ಬೆಂಬಲಿಸಿದರು. ದಯವಿಟ್ಟು ನಮ್ಮ ಸಾಲವನ್ನು ತೀರಿಸಲು ನಮ್ಮ ಕಾರು ಮತ್ತು ಮನೆಯನ್ನು ಮಾರಾಟ ಮಾಡಿ,” ಎಂದು ಅವರು ತಮ್ಮ ಅಂತಿಮ ಪತ್ರದಲ್ಲಿ ಕೋರಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಂಗಳವಾರ ರಾತ್ರಿ ದಂಪತಿಗಳು ತಮ್ಮ ಮನೆಯ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ 4 ವರ್ಷದ ಮಗನ ಶವವು ಮತ್ತೊಂದು ಕೋಣೆಯಲ್ಲಿ ಕಂಡುಬಂದಿದೆ. ತನಿಖೆಯಿಂದ ತಿಳಿದುಬಂದಿರುವಂತೆ, ದಂಪತಿಗಳು ಮೊದಲು ತಮ್ಮ ಮಗನಿಗೆ ವಿಷಪ್ರಾಶನ ಮಾಡಿದ್ದಾರೆ. ನಂತರ ತಾವು ನೇಣಿಗೆ ಶರಣಾಗಿದ್ದಾರೆ.