ಬೆಂಗಳೂರು: ಧರ್ಮಸ್ಥಳದಲ್ಲಿ ತಮ್ಮ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿದ್ದ ಸುಜಾತಾ ಭಟ್, ತಾನು ಹೇಳಿದ್ದೆಲ್ಲ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ಅನನ್ಯಾ ಎಂಬ ಮಗಳೇ ತನಗಿರಲಿಲ್ಲ ಎಂದು ತಿಳಿಸಿರುವ ಅವರು, ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಟಿ ಎಂಬವರು ತನ್ನನ್ನು ಈ ಸುಳ್ಳು ಕಥೆಯನ್ನು ಕಟ್ಟಿ ದೂರು ನೀಡುವಂತೆ ಪ್ರಚೋದಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇನ್‌ಸೈಟ್‌ರಷ್ (InsightRush) ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಜಾತಾ ಭಟ್ ಈ ಆಘಾತಕಾರಿ ಸತ್ಯವನ್ನು ತೆರೆದಿಟ್ಟಿದ್ದಾರೆ.
ಸುಜಾತಾ ಭಟ್ ತಮ್ಮ ಸಂದರ್ಶನದಲ್ಲಿ, “ನನಗೆ ಅನನ್ಯಾ ಎಂಬ ಮಗಳೇ ಇರಲಿಲ್ಲ. ಆಸ್ತಿ ವಿಷಯದಲ್ಲಿ ನನಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಗಿರೀಶ್ ಮಟ್ಟಣ್ಣವರ್ ನನ್ನನ್ನು ಭೇಟಿಯಾಗಿ ಈ ಸುಳ್ಳು ಕಥೆಯನ್ನು ಕಟ್ಟಿ ದೂರು ನೀಡುವಂತೆ ಒತ್ತಾಯಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಕೆಲವು ದಿನ ಇದ್ದೆ,” ಎಂದು ತಿಳಿಸಿದ್ದಾರೆ. ತಮ್ಮ ತಾತನ ಆಸ್ತಿಯನ್ನು ಬೇರೊಂದು ಸಮುದಾಯಕ್ಕೆ ನೀಡಿದ್ದರಿಂದ ತಾನು ಆಕ್ರೋಶಗೊಂಡಿದ್ದೆ ಎಂದು ಹೇಳಿರುವ ಅವರು, ಆಸ್ತಿಯಲ್ಲಿ ತಮ್ಮ ಹಕ್ಕನ್ನು ಪಡೆಯಲು ಈ ದಾರಿಯನ್ನು ಅನುಸರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
“ನನ್ನ ಸಹಿಯನ್ನು ಪಡೆಯದೆ ಆಸ್ತಿಯನ್ನು ವರ್ಗಾಯಿಸಲಾಗಿದೆ. ಈ ಸಿಟ್ಟಿನಿಂದ ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಟಿ ಅವರ ಸಲಹೆಯಂತೆ ಈ ಕಥೆಯನ್ನು ಕಟ್ಟಿದೆ. ಈ ವಿಷಯ ಇಷ್ಟೊಂದು ದೊಡ್ಡದಾಗಿ, ನನ್ನ ತೇಜೋವಧೆಗೆ ಕಾರಣವಾಗುತ್ತದೆ ಎಂದು ಊಹಿಸಿರಲಿಲ್ಲ,” ಎಂದು ಸುಜಾತಾ ಭಟ್ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ತಾವು ಧರ್ಮಸ್ಥಳ ಕ್ಷೇತ್ರ ಅಥವಾ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಧರ್ಮಸ್ಥಳದ ಭಕ್ತರ ಭಾವನೆಗೆ ಧಕ್ಕೆ ತರುವ ಉದ್ದೇಶ ಹೊಂದಿರಲಿಲ್ಲ. ಜನತೆಯನ್ನು ಕ್ಷಮೆ ಕೇಳುತ್ತೇನೆ,” ಎಂದು ಅವರು ಕೋರಿದ್ದಾರೆ.
ಗಿರೀಶ್ ಮಟ್ಟಣ್ಣವರ್ ಈ ಆರೋಪಗಳ ಬಗ್ಗೆ ಇನ್ನೂ ಮಾಧ್ಯಮಗಳಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆಗಸ್ಟ್ 22ರ ಬೆಳಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಮುಂದೆ “ನನ್ನನ್ನೂ ಬಂಧಿಸಿ” ಎಂದು ಹೈಡ್ರಾಮಾ ಮಾಡಿದ್ದ ಗಿರೀಶ್, ಇದೀಗ ಮೀಡಿಯಾಗಳ ಮುಂದಿನಿಂದ ನಾಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಮತ್ತು ಜಯಂತ್ ಟಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.