ಬೆಂಗಳೂರು: ಯುವಜನ ಆಯೋಗ ರಚನೆ, ಯುವಜನರ ಹಕ್ಕುಗಳ ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಸಂವಾದ ಸಹಯಾನದ ಆಯೋಜನೆಯಲ್ಲಿ ನಡೆದ ಯುವಾಧಿವೇಶನ-2025 ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಯುವಜನರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ, ಶಾಲಾ-ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರ ಅಗತ್ಯ, ಸ್ವಚ್ಛ ಶೌಚಾಲಯದ ಬೇಡಿಕೆ, ನಿರುದ್ಯೋಗ ಸಮಸ್ಯೆಯ ಪರಿಹಾರ, ಲಿಂಗ ಸಮಾನತೆ, ಲೈಂಗಿಕ ಶಿಕ್ಷಣದ ಮಹತ್ವ ಸೇರಿದಂತೆ ಹಲವು ವಿಷಯಗಳನ್ನು ಮಂಡಿಸಿದರು.
ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಸಿ.ಜಿ. ಲಕ್ಷ್ಮೀಪತಿ ಮಾತನಾಡಿ, “ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವಿದೆ. ಯುವಜನರ ಧ್ವನಿಗೆ ಆದ್ಯತೆ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುವಂತೆ, ವಿದ್ಯಾರ್ಥಿಗಳಿಂದ ಶಿಕ್ಷಕರ ಮೌಲ್ಯಮಾಪನಕ್ಕೂ ವ್ಯವಸ್ಥೆ ಬೇಕು. ಪ್ರತಿ ಶಾಲಾ-ಕಾಲೇಜಿನಲ್ಲಿ ಆಪ್ತ ಸಮಾಲೋಚಕರ ಅಗತ್ಯವಿದೆ, ಇದಕ್ಕೆ ಯುವಜನ ಆಯೋಗ ರಚನೆಯೇ ಪರಿಹಾರ,” ಎಂದರು.
ಸಾಹಿತಿ ಮತ್ತು ರಂಗಭೂಮಿ ಕಲಾವಿದೆ ಡಾ. ದು. ಸರಸ್ವತಿ ಮಾತನಾಡಿ, “ಯುವಜನರು ಕಷ್ಟಗಳಲ್ಲಿ ಕುಗ್ಗದಿರುವ ಪ್ರತಿಜ್ಞೆ ಮಾಡಿಕೊಳ್ಳಬೇಕು. ಸವಾಲುಗಳನ್ನು ಎದುರಿಸಲು ಧೈರ್ಯ ಬೇಕು. ಯುವಜನರಿಗೆ ಸಾಕಷ್ಟು ಅವಕಾಶಗಳಿವೆ, ಆದರೆ ಸರಿಯಾದ ಮಾರ್ಗದರ್ಶನ ನೀಡುವ ಜವಾಬ್ದಾರಿ ಸಮಾಜದ ಮೇಲಿದೆ,” ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್. ಐ.ಪಿ.ಎಸ್., “ಯುವಜನರ ಮುಂದೆ ಸವಾಲುಗಳಿವೆ, ಆದರೆ ಪರಿಹಾರಗಳೂ ಇವೆ. ಈ ಪರಿಹಾರಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲರ ಸಹಕಾರ ಬೇಕು. ಯುವಜನರಿಗೆ ಜವಾಬ್ದಾರಿಗಳ ಜೊತೆಗೆ ಮಾರ್ಗದರ್ಶನವೂ ಅಗತ್ಯ,” ಎಂದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ, “ಯುವಜನರ ಹಕ್ಕುಗಳ ರಕ್ಷಣೆ ಅತ್ಯಂತ ಮುಖ್ಯ. ಹೋರಾಟ, ಅಭಿವ್ಯಕ್ತಿ, ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ಯುವಜನರ ಪಾತ್ರಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು. ಯುವಜನರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎರಡು ಅಧಿವೇಶನಗಳನ್ನು ಆಯೋಜಿಸಲಾಗಿತ್ತು:
- ಮೊದಲ ಅಧಿವೇಶನ: ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಜಿ. ಲಕ್ಷ್ಮೀಪತಿ, ಸಾಮಾಜಿಕ ಕಾರ್ಯಕರ್ತೆ ಡಾ. ದು. ಸರಸ್ವತಿ, ಸಂವಾದ ಸಹಯಾನದ ಕೋ-ಪ್ರೋಗ್ರಾಂ ಲೀಡ್ ಇಳಂಗೋ ಸ್ಟಾನಿಸ್ಲಾಸ್, ಮತ್ತು ಬೆಂಗಳೂರು ಯುವ ಸಂಪನ್ಮೂಲ ಕೇಂದ್ರದ ಪ್ರೋಗ್ರಾಂ ಅಸೋಸಿಯೇಟ್ ಮಿನಿಮೋಳ್ ಇವರ ನೇತೃತ್ವದಲ್ಲಿ ನಡೆಯಿತು.
- ಎರಡನೇ ಅಧಿವೇಶನ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಐ.ಎ.ಎಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್. ಐ.ಪಿ.ಎಸ್., ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ನಜ್ಮಾ ನಜೀರ್ ಚಿಕ್ಕನೇರಳೆ, ವಕೀಲೆ ಮೃದುಲಾ, ಮತ್ತು ಕೋಲಾರ ಯುವ ಸಂಪನ್ಮೂಲ ಕೇಂದ್ರದ ಶಬೀನಾ ಇವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂವಾದ ಸಹಯಾನದ ಎಲ್ಲಾ ಸಹೋದ್ಯೋಗಿಗಳು ಭಾಗವಹಿಸಿದ್ದು, ಅಡವಿ ಆರ್ಟ್ಸ್ ಕಲೆಕ್ಟಿವ್‌ನ ತಮಟೆ ಸದ್ದಿನೊಂದಿಗೆ ವಿಶೇಷ ಆಕರ್ಷಣೆಯನ್ನು ಸೃಷ್ಟಿಸಿತು.