ಬೆಂಗಳೂರು : ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪತ್ನಿ ವಿಜಯಲಕ್ಷ್ಮಿ ನಿವಾಸದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಂದ ಕೊನೆಗೂ ಅರೆಸ್ಟ್ ಆಗಿದ್ದು, ಶೀಘ್ರದಲ್ಲೇ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.
ಹೌದು, ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾರೆ. ರೇಣುಕಾಸ್ವಾಮಿ, ಚಿತ್ರದುರ್ಗದ ನಿವಾಸಿಯಾಗಿದ್ದು, ದರ್ಶನ್‌ರ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಜೂನ್ 8, 2024 ರಂದು ಕಿಡ್ನಾಪ್ ಆಗಿ ಕೊಲೆಯಾದರು.
ರೇಣುಕಾಸ್ವಾಮಿಯನ್ನು ಬೆಂಗಳೂರಿನ ಒಂದು ಶೆಡ್‌ನಲ್ಲಿ ಚಿತ್ರಹಿಂಸೆಕೊಟ್ಟು, ಕೊನೆಗೆ ಕೊಲೆ ಮಾಡಲಾಯಿತು. ಜೂನ್ 9, 2024 ರಂದು ಸುಮನಹಳ್ಳಿಯಲ್ಲಿ ಒಂದು ಒಳಚರಂಡಿಯ ಬಳಿ ಅವರ ಶವ ಕಂಡುಬಂದಿತ್ತು.
ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಂದ ಅರೆಸ್ಟ್ ಆಗಿದ್ದು, ಶೀಘ್ರದಲ್ಲೇ ಅವರನ್ನು ಜೈಲಿಗೆ ಕಳುಹಿಸುವ ತಯಾರಿ ನಡೆದಿದೆ.
ತನಿಖೆ ಮತ್ತು ಬಂಧನ:
-
ಜೂನ್ 9, 2024: ಸುಮನಹಳ್ಳಿಯ ಒಳಚರಂಡಿಯ ಬಳಿ ರೇಣುಕಾಸ್ವಾಮಿಯ ಶವ ಕಂಡುಬಂದಿತು.
- ಜೂನ್ 10, 2024: ನಾಲ್ವರು ಆರೋಪಿಗಳು ಆರ್ಥಿಕ ವಿವಾದದಿಂದ ಕೊಲೆ ಮಾಡಿದ್ದೇವೆ ಎಂದು ಶರಣಾದರಾದರೂ, ಅವರ ಹೇಳಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದವು. ತನಿಖೆಯು ದರ್ಶನ್‌ರ ಒಳಗೊಳ್ಳುವಿಕೆಯನ್ನು ಬಯಲಿಗೆ ತಂದಿತು.
- ಜೂನ್ 11, 2024: ದರ್ಶನ್‌ರನ್ನು ಮೈಸೂರಿನ ಜಿಮ್‌ನಿಂದ ಬಂಧಿಸಲಾಯಿತು. ಪವಿತ್ರಾ ಗೌಡ ಮತ್ತು ಇತರ 11 ಜನರನ್ನು ಕೂಡ ಬಂಧಿಸಲಾಯಿತು.
- ಸೆಪ್ಟೆಂಬರ್ 2024: ಬೆಂಗಳೂರು ಪೊಲೀಸರು 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದರು, ಪವಿತ್ರಾ ಗೌಡರನ್ನು ಮೊದಲ ಆರೋಪಿಯಾಗಿ ಮತ್ತು ದರ್ಶನ್‌ರನ್ನು ಎರಡನೇ ಆರೋಪಿಯಾಗಿ ಹೆಸರಿಸಿದರು.
- ಅಕ್ಟೋಬರ್ 30, 2024: ದರ್ಶನ್‌ಗೆ ಆರೋಗ್ಯ ಕಾರಣಗಳಿಗಾಗಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಯಿತು.
- ಡಿಸೆಂಬರ್ 13, 2024: ಕರ್ನಾಟಕ ಹೈಕೋರ್ಟ್ ದರ್ಶನ್, ಪವಿತ್ರಾ ಗೌಡ ಮತ್ತು ಐವರಿಗೆ ಜಾಮೀನು ನೀಡಿತು.
- ಆಗಸ್ಟ್ 14, 2025: ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ, ತಕ್ಷಣ ಬಂಧನಕ್ಕೆ ಆದೇಶ!
ಸುಪ್ರೀಂ ಕೋರ್ಟ್‌ನ ಜಸ್ಟೀಸ್ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ನೇತೃತ್ವದ ಬೆಂಚ್, ಕರ್ನಾಟಕ ಹೈಕೋರ್ಟ್‌ನ ಜಾಮೀನು ಆದೇಶವನ್ನು “ಕಾನೂನು ತೊಡಕು”ಗಳಿಂದ ಕೂಡಿದೆ ಎಂದು ಕರೆದು, ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ರದ್ದುಗೊಳಿಸಿತು. ಕೊಲೆಯ ಗಂಭೀರತೆ ಮತ್ತು ತನಿಖೆಯ ಮೇಲಿನ ಸಂಭಾವ್ಯ ಪರಿಣಾಮವನ್ನು ಹೈಕೋರ್ಟ್ ಪರಿಗಣಿಸಲಿಲ್ಲ ಎಂದು ಕೋರ್ಟ್ ಟೀಕಿಸಿತು.
ದರ್ಶನ್ ಜೈಲಿನಲ್ಲಿರುವಾಗಲೇ ಅವರ ‘ಡೆವಿಲ್’ ಸಿನಿಮಾದ ಹಾಡು ನಾಳೆ (ಆಗಸ್ಟ್ 15) ಬಿಡುಗಡೆಯಾಗಲಿದೆ. 2011ರಲ್ಲಿ ಜೈಲಿನಲ್ಲಿದ್ದಾಗ ಬಿಡುಗಡೆಯಾದ ‘ಸಾರಥಿ’ ಸಿನಿಮಾ ಸೂಪರ್‌ಹಿಟ್ ಆಗಿತ್ತು. ಈಗ ‘ಡೆವಿಲ್’ ಕೂಡ ಅಂತಹದ್ದೇ ಯಶಸ್ಸನ್ನು ಕಾಣುತ್ತದೆಯೇ ಎಂದು ಕಾದುನೋಡಬೇಕು.